ದೊಡ್ಡಬಳ್ಳಾಪುರ: ಬಮೂಲ್ ನಿಂದ ದೊಡ್ಡಬಳ್ಳಾಪುರ ತಾಲೂಕಿನಲ್ಲಿ ಟೆಟ್ರಾ ಪ್ಯಾಕ್ ಘಟಕ ಸ್ಥಾಪನೆಗೆ ಮುಂದಾಗಿದ್ದು, ಸುಮಾರು 100 ಕೋಟಿ ವೆಚ್ಚದಲ್ಲಿ ಘಟಕ ಪ್ರಾರಂಭವಾಗಲಿದ್ದು ಬಮೂಲ್ ಅಧ್ಯಕ್ಷರು ಮತ್ತು ಕೆಎಂಎಫ್ ನಿರ್ದೇಶಕರು ಸ್ಥಳ ಪರಿಶೀಲನೆ ನಡೆಸಿದ್ದಾರೆ.
ಬೆಂಗಳೂರು ಹಾಲು ಉತ್ಪಾದಕರ ಸಹಕಾರ ಸಂಘ (ಬಮೂಲ್) ಕ್ಕೆ ಒಳಪಡುವ ಬೆಂಗಳೂರು ನಗರ, ಗ್ರಾಮಾಂತರ ಮತ್ತು ರಾಮನಗರ ಜಿಲ್ಲೆಗಳ ವ್ಯಾಪ್ತಿಯಲ್ಲಿ ಪ್ರತಿನಿತ್ಯ ಸುಮಾರು 19 ಲಕ್ಷ ಲೀಟರ್ ಹಾಲು ಸಂಗ್ರಹವಾಗುತ್ತಿದೆ. ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಾಲು ಉತ್ಪಾದನೆಯಾಗುವ ಕಾರಣಕ್ಕೆ ಹೆಚ್ಚುವರಿ ಹಾಲನ್ನು ಹೇಗೆ ಬಳಕೆ ಮಾಡಬೇಕೆನ್ನುವ ದೊಡ್ಡ ಸವಾಲು ಬಮೂಲ್ ಮುಂದಿದೆ.
ಈ ಸಮಸ್ಯೆಗೆ ಪರಿಹಾರವಾಗಿ ಬಂದಿದ್ದು ಟೆಟ್ರಾ ಪ್ಯಾಕ್ ನಿರ್ಮಾಣ, ಸುಮಾರು 100 ಕೋಟಿ ವೆಚ್ಚದಲ್ಲಿ ಟೆಟ್ರಾ ಪ್ಯಾಕ್ ಘಟಕ ನಿರ್ಮಾಣವಾಗಲಿದೆ. ಬಮೂಲ್ ಅಧ್ಯಕ್ಷ ನರಸಿಂಹಮೂರ್ತಿ, ಕೆಎಂಎಫ್ ನಿರ್ದೇಶಕ ಬಿ.ಸಿ ಆನಂದ್ ಕುಮಾರ್, ಬಮೂಲ್ ವ್ಯವಸ್ಥಾಪಕ ನಿರ್ದೇಶಕ ಸುರೇಶ್ ಸೇರಿದಂತೆ ತಾಂತ್ರಿಕ ಅಧಿಕಾರಿಗಳು ದೊಡ್ಡಬಳ್ಳಾಪುರ ಹಾಲಿನ ಡೈರಿ ಅವರಣ ಸ್ಥಳದ ಪರಿಶೀಲನೆ ನಡೆಸಿದ್ದಾರೆ.
ಕೊರೊನಾ ಸಮಯದಲ್ಲಿ ಟೆಟ್ರಾ ಪ್ಯಾಕ್ ಗೆ ಸಾಕಷ್ಟು ಬೇಡಿಕೆ ಬಂದಿತ್ತು. ಈಗಾಗಲೇ ಶಾಲಾ ಮಕ್ಕಳಿಗೆ ಕ್ಷೀರಭಾಗ್ಯ ಯೋಜನೆಯಲ್ಲಿ ಹಾಲು ವಿತರಣೆ ಮಾಡಲಾಗುತ್ತಿದೆ. ಮಕ್ಕಳಿಗೆ ಗುಣಮಟ್ಟದ ಹಾಲು ವಿತರಣೆ ಮಾಡಬೇಕೆನ್ನುವ ಕಾರಣಕ್ಕೆ ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ವಿತರಣೆ ಮಾಡುವ ಬಗ್ಗೆ ರಾಜ್ಯ ಸರ್ಕಾರ ಚಿಂತನೆ ನಡೆಸಿದೆ. ಒಂದು ವೇಳೆ ಶಾಲಾ ಮಕ್ಕಳಿಗೆ ಟೆಟ್ರಾ ಪ್ಯಾಕ್ ವಿತರಣೆ ಮಾಡಿದ್ದಲ್ಲಿ ಟೆಟ್ರಾ ಪ್ಯಾಕ್ ಗಳಿಗೆ ಮತ್ತುಷ್ಟು ಬೇಡಿಕೆ ಬರಲಿದೆ.
ಹಲವು ವರ್ಷಗಳಿಂದ ಗ್ರಾಮೀಣ ಭಾಗಕ್ಕೆ ಕೆಎಂಎಫ್ ಮತ್ತು ಬಮೂಲ್ ನಿಂದ ಯಾವುದೇ ಯೋಜನೆ ದೊರೆತಿರಲಿಲ್ಲ. ಇದೀಗ ತಾಲೂಕಿನಲ್ಲಿ ಟೆಟ್ರಾ ಪ್ಯಾಕ್ ನಿರ್ಮಾಣಕ್ಕೆ ಕಾಲ ಕೂಡಿ ಬಂದಿರುವುದಕ್ಕೆ ಕೆಎಂಎಫ್ ನಿರ್ದೇಶಕ ಬಿ.ಸಿ. ಆನಂದ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ.
PublicNext
29/04/2022 04:51 pm