ಬೆಂಗಳೂರು: ಎಲ್ಲ ಚೆನ್ನಾಗಿದ್ದಿದ್ರೆ ಆ ಮನೆಯಲ್ಲಿ ಮದುವೆ ಸಂಭ್ರಮ ನಡೆಯಬೇಕಿತ್ತು. ಆದ್ರೆ ಒಳ್ಳೆ ಕೆಲಸಕ್ಕೆ ನೂರಾರು ವಿಘ್ನವಾಗಿ ಆ ಮನೆಯಲ್ಲಿ ಸೂತಕ ತುಂಬಿಕೊಂಡಿದೆ. ಅದೊಂದು ಫೋಟೋ ಇಡೀ ಮನೆಯ ವಾತಾವರಣವನ್ನೇ ಕೆಡಿಸಿ ತಾಯಿಯನ್ನೆ ಬಲಿ ಪಡೆದಿದೆ.
ಡಿಜೆ ಹಳ್ಳಿಯ ವಿನಾಯಕ ಟೆಂಟ್ ರೋಡ್‌ನಲ್ಲಿ ನಡೆದ ಘಟನೆ ಇದು. ಕಳೆದ 21 ನೇ ತಾರೀಕು ಶಾಹಿದಾ ಎಂಬಾಕೆಗೆ ಗಂಭೀರ ಗಾಯವಾದ ಹಿನ್ನಲೆ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ಆಕೆ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾಳೆ. ಇನ್ನೂ ಈಕೆ ಸಾವಿಗೆ ಕಾರಣ ಮಗಳು ಸ್ನೇಹಿತನ ಜೊತೆ ತೆಗಿಸಿದ್ದ ಅದೊಂದು ಫೋಟೋ.
ಮೃತ ಶಾಹಿದಾ ಹಾಗು ಮುನಾವರ್ ದಂಪತಿಗೆ ಇಬ್ಬರು ಹೆಣ್ಣುಮಕ್ಕಳು. ಕುದುರೆ ಗಾಡಿ ಓಡಿಸಿಕೊಂಡು ಜೀವನ ಮಾಡ್ತಿದ್ದ ಮುನಾವರ್ ಮೊದಲ ಮಗಳಿಗೆ ಮದ್ವೆ ಮಾಡಿದ್ದ. ಎರಡನೇ ಮಗಳ ಮದ್ವೆ ಮಾಡುವ ಸಲುವಾಗಿ ಹುಡುಗನನ್ನ ಹುಡುಕಿ ಎಂಗೇಜ್ಮೆಂಟ್ ಕೂಡ ಮಾಡಿದ್ದ. ಮದ್ವೆ ಡೇಟ್ ಫಿಕ್ಸ್ ಮಾಡ್ಬೇಕು ಎಂದು ಓಡಾಡಿಕೊಂಡಿದ್ದ ದಂಪತಿಗಳಿಗೆ ಹುಡುಗನ ಕಡೆಯವರಿಂದ ಒಂದು ಶಾಕ್ ಕಾದಿತ್ತು. ಅದ್ಯಾರೋ ಗೊತ್ತಿಲ್ಲ.. ಮುನಾವರ್‌ನ ಎರಡನೇ ಮಗಳು ಬೇರೊಬ್ಬ ಹುಡುಗನ ಜೊತೆ ಇರೋ ಫೊಟೋವನ್ನ ಎಂಗೇಜ್ಮೆಂಟ್ ಆಗಿದ್ದ ಹುಡುಗನ ತಂದೆಗೆ ತಲುಪಿಸಿ ಬಿಟ್ಟಿದ್ರು. ಎಡವಟ್ಟಾಗಿದ್ದು ಇಲ್ಲೆ. ಹುಡುಗನ ತಂದೆ ಆ ಪೋಟೋವನ್ನ ತಂದು ಮುನಾವರ್‌ಗೆ ತೋರಿಸಿದ್ದ. ಮುನಾವರ್‌ಗೂ ಈ ಸಂದರ್ಭದಲ್ಲಿ ತೀವ್ರ ಮುಜುಗರವಾಗಿತ್ತು. ಮನೆಗೆ ಬಂದವನೇ ಮಗಳ ಮೇಲೆ ರೇಗಾಡಿ ಪತ್ನಿ ಶಾಹಿದಾ ಜೊತೆಗೂ ಜಗಳಕ್ಕೆ ನಿಂತುಬಿಟ್ಟಿದ್ದ. ಮಗಳ ಬಗ್ಗೆ ಯಾಕೆ ಗಮನ ಹರಿಸಿಲ್ಲ ಎಂದು ಕಿರಿಕ್ ತೆಗೆದ. ಈ ವೇಳೆ ಕೈ ಕೈ ಮಿಲಾಯಿಸೋ ಹಂತ ತಲುಪಿ ಮುನಾವರ್, ಪತ್ನಿ ಶಾಹಿದಾಳನ್ನ ತಳ್ಳಿದ್ದಾನೆ. ಶಾಹಿದಾ ಕೆಳಗಿದ್ದ ಹರಿತ ಆಯುಧದ ಮೇಲೆ ಬಿದ್ದಿದ್ದಾಳೆ. ಹೊಟ್ಟೆ ಭಾಗಕ್ಕೆ ಏಟು ಬಿದ್ದ ಕಾರಣ ತೀವ್ರ ರಕ್ತಸ್ರಾವವಾಗಿತ್ತು. ತಕ್ಷಣ ಆಕೆಯನ್ನ ಆಸ್ಪತ್ರೆಗೆ ಕೊಂಡೊಯ್ದರಾದರೂ ನಾಲ್ಕು ದಿನಗಳ ಬಳಿಕ ಶಾಹಿದಾ ಸಾವನ್ನಪ್ಪಿದ್ದಾಳೆ.
ಇನ್ನು ಈ ಸಂಬಂಧ ಪೊಲೀಸರು ಮುನಾವರ್‌ನನ್ನ ವಶಕ್ಕೆ ಪಡೆದಿದ್ದಾರೆ. ಇದು ಉದ್ದೇಶಪೂರ್ವಕವಾಗಿ ನಡೆದ ಕೊಲೆ ಅಲ್ಲದಿದ್ದರೂ ದೂರು ದಾಖಲಾಗಲೇಬೇಕು. ಸದ್ಯ ಈ ಸಂಬಂಧ ಡಿಜೆ ಹಳ್ಳಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
PublicNext
26/09/2022 07:58 pm