ಬೆಂಗಳೂರು: ಪಕ್ಕದ ಮನೆಯ ನಾಯಿ ತನ್ನ ನಾಯಿಯನ್ನು ಕಚ್ಚಿದೆ ಎಂಬ ಕ್ಷುಲ್ಲಕ ಕಾರಣಕ್ಕೆ ನಾಯಿಯನ್ನು ಮನಸೋ ಇಚ್ಛೆ ಥಳಿಸಿ ವಿಕೃತಿ ಮೆರೆದಿರುವ ಘಟನೆ ವೈಟ್ ಫೀಲ್ಡ್ ವಿಭಾಗದ ಕೆಆರ್ ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಂಜುನಾಥ ಲೇಔಟ್ ನಲ್ಲಿ ನಡೆದಿದೆ.
ಮಂಜುನಾಥ್ ಲೇಔಟ್ ನಿವಾಸಿ ಗದ್ದಿಗೆಪ್ಪ ಎಂಬುವವರಿಗೆ ಸೇರಿದ ನಾಯಿ ತೀವ್ರ ದಾಳಿಗೆ ಒಳಗಾಗಿದೆ. ಪಕ್ಕದ ಮನೆಯ ನಾಗರಾಜ್ ಎಂಬುವವರ ಮೂವರು ಮಕ್ಕಳಾದ ರಾಹುಲ್, ರಚಿತ್ ಮತ್ತು ರಂಜಿತ್ ಆ ಬಡಪಾಯಿ ನಾಯಿಯನ್ನು ಮನಬಂದಂತೆ ಥಳಿಸಿದ ಹೃದಯಹೀನರು.
ಗದ್ದಿಗೆಪ್ಪರವರು ವಾಸವಿದ್ದ ಮನೆಯ ಪಕ್ಕದ ರಸ್ತೆಯವರಾದ ನಾಗರಾಜ್ ಹಾಗೂ ಅವರ ಮೂವರು ಮಕ್ಕಳು ದೊಣ್ಣೆಗಳಿಂದ ನಾಯಿ ಮೇಲೆ ಎರಗಿ ಸಾಯುವಂತೆ ಚಚ್ಚಿದ್ದಾರೆ. ನಾಗರಾಜ್ ರವರ ನಾಯಿಯನ್ನು ಗದ್ದಿಗೆಪ್ಪರವರ ನಾಯಿ ಬೊಗಳಿ, ಕಚ್ಚಿದೆ ಎಂಬ ಆರೋಪದ ಹಿನ್ನಲೆಯಲ್ಲಿ ನಿನ್ನೆ ರಾತ್ರಿ 10 ಗಂಟೆ ಸುಮಾರಿಗೆ ತೀವ್ರವಾಗಿ ರಕ್ತ ಸೋರುವಂತೆ ಥಳಿಸಿದ್ದಾರೆ.
ಥಳಿತದ ತೀವ್ರತೆಗೆ ಗದ್ದಿಗೆಪ್ಪರವರ ನಾಯಿಯ ತಲೆಗೆ ತೀವ್ರ ಗಾಯಗಳಾಗಿದ್ದು, ಕಣ್ಣುಗುಡ್ಡೆಯಿಂದ ಮಾಂಸ ಹೊರಬಂದಿದೆ! ನಾಯಿ ಸಾವು- ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಬದುಕುವ ಸಾಧ್ಯತೆ ತೀರಾ ಕಡಿಮೆ ಎನ್ನಲಾಗಿದೆ. ಘಟನೆ ಹಿನ್ನಲೆ ಮೊದಲು ಹಲ್ಲೆಗೊಳಗಾದ ಗದ್ದಿಗೆಪ್ಪ ಈಗ ರಾಹುಲ್, ರಚಿತ್ ಮತ್ತು ರಂಜಿತ್ ವಿರುದ್ಧ ಕೆ.ಆರ್.ಪುರ ಠಾಣೆಯಲ್ಲಿ ಪ್ರಕರಣ ದಾಖಲಿಸಿ, ಕಾನೂನು ಹೋರಾಟಕ್ಕೆ ಮುಂದಾಗಿದ್ದಾರೆ.
- ಬಲರಾಮ್ ವಿ. ಪಬ್ಲಿಕ್ ನೆಕ್ಸ್ಟ್ ಕೆಆರ್ ಪುರಂ
PublicNext
05/10/2022 08:54 am