ಬೆಂಗಳೂರು: ಚಾಲಕನ ಎಣ್ಣೆ ಚಟಕ್ಕೆ ನಿವೃತ್ತ ಯೋಧರೊಬ್ಬರು ಬಲಿಯಾಗಿದ್ದಾರೆ. ಈ ಘಟನೆ ನಿನ್ನೆ ಸೋಮವಾರ ತಡರಾತ್ರಿ ಹೆಬ್ಬಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಕೊಡಿಗೇಹಳ್ಳಿಯ ವಿರುಪಾಕ್ಷಪುರ ನಿವಾಸಿ ರವಿಶಂಕರ್ ರಾವ್ ಮತಪಟ್ಟಿದ್ದಾರೆ. ಘಟನೆಯಲ್ಲಿ ಅವರ ಸ್ನೇಹಿತರಾದ ಮಂಜುನಾಥ್, ನವೀನ್ ಹಾಗೂ ಹೋಟೆಲ್ ಸಿಬ್ಬಂದಿ ರಾಘವೇಂದ್ರ ಸೇರಿ ನಾಲ್ವರು ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ನಿವೃತ್ತ ಯೋಧರಾಗಿರುವ ರವಿಶಂಕರ್‌ರಾವ್, ಖಾಸಗಿ ಸೆಕ್ಯೂರಿಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ ೧೧.೪೫ರ ಸುಮಾರಿಗೆ ಕೆಲಸ ಮುಗಿಸಿಕೊಂಡು ಮಂಜುನಾಥ್, ನವೀನ್ ಜತೆ ಮನೆಗೆ ಹೋಗುತ್ತಿದ್ದರು. ಈ ವೇಳೆ ಕೊಡಿಗೇಹಳ್ಳಿ ಮುಖ್ಯರಸ್ತೆಯಲ್ಲಿ ಊಟ ಪಾರ್ಸೆಲ್ ತೆಗೆದುಕೊಂಡು ಹೋಗಲು ಪಾದಚಾರಿ ಮಾರ್ಗದಲ್ಲಿ ನಿಂತಿದ್ದರು. ಈ ವೇಳೆ ಕೊಡಿಗೇಹಳ್ಳಿ ಕಡೆಯಿಂದ ವೇಗವಾಗಿ ಬಂದ ಕಾರು ಚಾಲಕ ಏಕಾಏಕಿ ಪಾದಚಾರಿ ಮಾರ್ಗದ ಮೇಲೆ ಕಾರು ಹತ್ತಿಸಿ, ರವಿಶಂಕರ್ ರಾವ್ ಸೇರಿ ಐವರಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಗಂಭೀರವಾಗಿ ಗಾಯಗೊಂಡಿದ್ದ ರವಿಶಂಕರ್ ರಾವ್ ಮೃತಪಟ್ಟಿದ್ದಾರೆ. ಇತರರಿಗೆ ಗಾಯವಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆರೋಪಿ ಕಾರು ಚಾಲಕ ಕೂಡ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾನೆ. ಚೇತರಿಕೆ ಬಳಿಕ ಆರೋಪಿಯನ್ನು ಬಂಧಿಸಲಾಗುತ್ತದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಬ್ಬಾಳ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
PublicNext
11/10/2022 10:49 pm