ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಾಗಲಕೋಟೆ: "ಪ್ರಭು ಪರಂ‌ ಜ್ಯೋತಿ"ಗೆ ಭವ್ಯ ಸ್ವಾಗತ, ಅದ್ಧೂರಿ ಮೆರವಣಿಗೆ- ಸಾವಿರಾರು ಭಕ್ತಜನ ಭಾಗಿ

ರಬಕವಿ-ಬನಹಟ್ಟಿ: ಶ್ರೀ ಅಲ್ಲಮ ಪ್ರಭುಗಳ " ಪ್ರಭು ಪರಂ ಜ್ಯೋತಿ" ಬಳ್ಳಿಗಾವಿಯಿಂದ ಸುಕ್ಷೇತ್ರ ಚಿಮ್ಮಡಕ್ಕೆ ಆಗಮಿಸಿದ್ದು, ಸೋಮವಾರ ಅದ್ಧೂರಿ ಮೆರವಣಿಗೆಯ ಮೂಲಕ ಪ್ರಭುವಿನ ಕ್ಷೇತ್ರವಾದ ತೇರದಾಳಕ್ಕೆ ತಲುಪಿತು.

ಚಿಮ್ಮಡದಿಂದ ಹೊರಟ ಮೆರವಣಿಗೆಯು ರಬಕವಿ, ಹನಗಂಡಿ ಮುಖ್ಯರಸ್ತೆಯ ಮಾರ್ಗವಾಗಿ ತೇರದಾಳ ಪುರ ಪ್ರವೇಶಿಸಿತು.

ಮೆರವಣಿಗೆಯ ಸಾನಿಧ್ಯವನ್ನು ಶೇಗುಣಸಿಯ ಮಹಾಂತ ದೇವರು, ಚಿಮ್ಮಡದ ಪ್ರಭು ಸ್ವಾಮೀಜಿ, ತೇರದಾಳದ ಗಂಗಾಧರ ದೇವರು ವಹಿಸಿಕೊಂಡು ಪಾದಯಾತ್ರೆಯಲ್ಲಿ ಭಾಗಿಯಾದರು.

ಭಕ್ತರು ದಾರಿಯುದ್ದಕ್ಕೂ ನಗರ-ಗ್ರಾಮಗಳಲ್ಲಿ ಭವ್ಯ ಮೆರವಣಿಗೆಯನ್ನು ಸಂಭ್ರಮದಿಂದ ಸ್ವಾಗತಿಸಿದರು. ಕರಡಿ, ಮಜಲು, ನಗಾರಿ, ಕೈಪೆಟ್ಟು, ಸಾಂಬಾಳ ಸೇರಿದಂತೆ ಹತ್ತುಹಲವಾರು ವಾದ್ಯಗಳು ಮೆರವಣಿಗೆಗೆ ಕಳೆಕಟ್ಟಿದವು. ‌ನೂರಾರು ಮುತ್ತೈದೆಯರು ಆರತಿ ಹಿಡಿದು, ಕುಂಭಮೇಳದೊಂದಿಗೆ ಪ್ರಭುವಿನ ಓಂಕಾರ ಧ್ಯಾನ ಮಾಡುತ್ತಾ ಸಾಗಿದರು.

ಪ್ರಭುವಿನ ಪಲ್ಲಕ್ಕಿ ಉತ್ಸವ, ಪರಂ ನಿರಂಜನ ಜ್ಞಾನೀಯ ಪ್ರಭು ಜ್ಯೋತಿಯ ಭವ್ಯಾಲಂಕಾರಿಕ ವಾಹನ, ಐವತ್ತಕ್ಕೂ ಅಧಿಕ ಚಕ್ಕಡಿಗಳಲ್ಲಿ ಅನುಭವ ಮಂಟಪದ ಭಾವಚಿತ್ರಗಳ ಭವ್ಯ ಮೆರವಣಿಗೆಗಳು ಶರಣ ಕಾಲದ ಉತ್ಸವವನ್ನು ಮರುಕಳಿಸುವಂತೆ ಮಾಡಿತು. ದಾರಿಯುದ್ದಕ್ಕೂ ಪಾದಯಾತ್ರಾರ್ಥಿಗಳಿಗಾಗಿ ಪಾನಕ, ಪ್ರಸಾದ ಸೇರಿದಂತೆ ವಿವಿಧ ವ್ಯವಸ್ಥೆಯನ್ನು ಮಾಡಲಾಗಿತ್ತು.

ಮಹಿಳೆಯರು, ಚಿಕ್ಕಮಕ್ಕಳು ಸೇರಿದಂತೆ ಹತ್ತು ಸಾವಿರಕ್ಕೂ ಅಧಿಕ ಸದ್ಭಕ್ತರು ಮೆರವಣಿಗೆಯಲ್ಲಿ ಭಾಗಿಯಾಗಿ ಪ್ರಭುವಿನ ಉತ್ಸವಕ್ಕೆ ಸಾಕ್ಷಿಯಾದರು‌. ತೇರದಾಳ ನಗರ ಸುತ್ತಮುತ್ತಲಿನ ಗ್ರಾಮಸ್ಥರು ಅಷ್ಟೇ ಅಲ್ಲದೆ, ರಾಜ್ಯ ಮತ್ತು ಮಹಾರಾಷ್ಟ್ರದ ಭಕ್ತಾದಿಗಳು ಭಾಗಿಯಾಗಿದ್ದರು. ಮನೆಮನೆಗಳ ಮುಂದೆ ಭಕ್ತರು ಪೂಜೆ, ಆರತಿ ಮಾಡಿ, ಹೂಮಳೆಗೆರೆದು ಜ್ಯೋತಿಯನ್ನು ಶ್ರದ್ಧಾಭಕ್ತಿ ಪೂರಕವಾಗಿ ಸ್ವಾಗತಿಸಿದರು.

Edited By : Vinayak Patil
PublicNext

PublicNext

14/10/2024 08:20 pm

Cinque Terre

31.85 K

Cinque Terre

0