ಬಾಗಲಕೋಟೆ: 'ನಮ್ಮನ್ನು ಬೂಟ್ ನಿಂದ ಒದ್ದೀರಿ!... ಕುಡ್ಯಾಕ್ ನೀರ್ ಕೇಳಿದ್ರ ಬೂಟ್‌ನಲ್ಲಿ ನೀರು ಹಾಕಿ ಕುಡ್ಸಿದ್ರಿ... ನಮ್ಮ ಕೈಕಾಲು ಕಟ್ಟಿ ನಮ್ಮ ಮೇಲೆ ಐದಾರು ಜನ ಪೊಲೀಸರು ಮಾನವೀಯತೆ ಮರೆತು ಅಮಾನುಷವಾಗಿ ಚಿತ್ರಹಿಂಸೆ ನೀಡಿದ್ರು. ನಾವ್ ಯಾವ ತಪ್ಪು ಮಾಡಿಲ್ಲ. ನಮ್ಮಿಂದ ಯಾವ ತಪ್ಪು ಆಗಿಲ್ಲವೆಂದರೂ ಕೇಳದೆ ನಮ್ಮನ್ನು ಅವಮಾನಕರವಾಗಿ ಪೊಲೀಸರು ನಡೆಸಿಕೊಂಡರು ಎಂದು ಕೆರೂರ ಗಣೇಶೋತ್ಸವ ಪ್ರಕರಣದ ಆರೋಪಿಗಳು ಪೊಲೀಸರ ವಿರುದ್ಧ ದೂರಿದರು.
ಗಣೇಶೋತ್ಸವ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆದಿರಲಿಲ್ಲ. ಪೊಲೀಸರ ಮೇಲೆ ಯಾರೂ ಹಲ್ಲೆ ನಡೆಸಿರಲಿಲ್ಲ. ದಟ್ಟಣೆಯಲ್ಲಿ ಯಾರದ್ದೋ ಕೈ ತಾಕಿ ಪಿಎಸ್ಐ ಮೂಗು ಒಡೆದಿದೆ. ಅದನ್ನೇ ನೆಪವಾಗಿಸಿಕೊಂಡು ಉದ್ದೇಶಪೂರ್ವಕವಾಗಿ ಗಣೇಶೋತ್ಸವ ಮೆರವಣಿಗೆ ವೇಳೆ ನಮ್ಮ ಮೇಲೆ ಏಕಾಏಕಿ ದಾಳಿ ನಡೆಸಿ ಕೆರೂರ ಠಾಣೆಗೆ ಕರೆದುಕೊಂಡು ಹೋಗಿ ಪ್ರಕರಣ ದಾಖಲಿಸಿಕೊಂಡ್ರು.
ಅಲ್ಲಿಂದ ನಮ್ಮನ್ನು ಬಾದಾಮಿ ಠಾಣೆಗೆ ಕರೆದುಕೊಂಡು ಹೋಗಿ ಕೈಕಾಲು ಕಟ್ಟಿ ಚಿತ್ರಹಿಂಸೆ ನೀಡಿದರು ಎಂದು ಪ್ರಮುಖ ಆರೋಪಿಗಳಾದ ಶರಣು ಸಜ್ಜನ, ರಾಜು ತಳವಾರ ಹಾಗೂ ಗಂಗಣ್ಣ ಮರೆಗುದ್ದಿ ನಗರದಲ್ಲಿಂದು ನಡೆದ ಪ್ರತ್ರಿಕಾಗೋಷ್ಠಿಯಲ್ಲಿ ವಿವರಿಸಿದರು.
ತಪ್ಪು ಮಾಡದ ನಮಗೆ ಚಿತ್ರಹಿಂಸೆ ನೀಡಿದ ಪೊಲೀಸರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಪೊಲೀಸರು ಮಾನವೀಯತೆ, ಮನುಷ್ಯತ್ವ ಮರೆತು, ದುರುದ್ದೇಶದಿಂದ ನಮ್ಮ ಮೇಲೆ ಪ್ರಕರಣ ದಾಖಲಿಸಿ, ಹಿಂದು ಸಂಘಟನೆ ಕಾರ್ಯಕರ್ತರ ಹತ್ತಿಕ್ಕುವ ಕೆಲಸ ನಡೆಸಿದ್ದಾರೆ ಎಂದು ಆಪಾದಿಸಿದರು.
Kshetra Samachara
29/09/2022 04:36 pm