ಉಡುಪಿ: ಉಡುಪಿಯಲ್ಲಿ ಈ ಬಾರಿ ಹಡಿಲು ಬಿಟ್ಟಿದ್ದ ಭೂಮಿಯಲ್ಲಿ ಭತ್ತ ಕೃಷಿ ಮಾಡಲಾಗಿತ್ತು. ಶಾಸಕ ರಘುಪತಿ ಭಟ್ ನೇತೃತ್ವದಲ್ಲಿ ಸುಮಾರು ಎರಡು ಸಾವಿರ ಎಕರೆಗಳಷ್ಟು ಪ್ರದೇಶದಲ್ಲಿ ಅಪಾರ ಪ್ರಮಾಣದ ಭತ್ತ ಬೆಳೆಯಲಾಗಿದೆ. ಇದೀಗ ಮಳೆ ಕಡಿಮೆಯಾಗುತ್ತಿದ್ದಂತೆ ಭತ್ತದ ಕಟಾವು ಮುಗಿದಿದ್ದು, ಉಡುಪಿಯ ಕೇದಾರ ಕಜೆ ಎಂಬ ಬ್ರಾಂಡ್ ನಲ್ಲಿ ಈ ಕುಚ್ಚಿಗೆ ಅಕ್ಕಿ ಮಾರಾಟ ಮಾಡಲು ಚಿಂತನೆ ನಡೆದಿದೆ.
ಈ ಪ್ರಯುಕ್ತ ಉಡುಪಿಯ ಶ್ರೀ ಕೃಷ್ಣನಿಗೆ ಕೇದಾರ ಕಜೆಯ ಮೊದಲ ಫಸಲನ್ನು ಅರ್ಪಿಸಲಾಯಿತು. ಸಂಪೂರ್ಣ ಸಾವಯವ ಕುಚ್ಚಲಕ್ಕಿ "ಉಡುಪಿ ಕೇದಾರ ಕಜೆ" ಹೆಸರಿನಲ್ಲಿ ಮಾರುಕಟ್ಟೆಗೆ ಬರಲಿದ್ದು, ಸುಮಾರು 100 ಕೆ.ಜಿ. ಭತ್ತವನ್ನು ಬೆಳ್ತಿಗೆ ಅಕ್ಕಿಯನ್ನಾಗಿ ಮಾಡಿ ಶ್ರೀಕೃಷ್ಣ ದೇವರಿಗೆ ಸಮರ್ಪಿಸಲಾಯ್ತು.
ಬಳಿಕ ಪರ್ಯಾಯ ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರಿಗೆ ಹಸ್ತಾಂತರಿಸಿದರು.
ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಗಳು ಸಹಿತ ಮುಂಬೈ, ಬೆಂಗಳೂರಿನಲ್ಲಿ ಕೇದಾರ ಅಕ್ಕಿಯನ್ನು ಮಾರಾಟ ಮಾಡಲು ಆನ್ ಲೈನ್ ವ್ಯವಸ್ಥೆ ಜಾರಿಗೆ ಬರಲಿದೆ. ಡಿಸೆಂಬರ್ ಮಾಸಾಂತ್ಯದಲ್ಲಿ ಸ್ವತಃ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆನ್ಲೈನ್ ಮಾರಾಟಕ್ಕೆ ಚಾಲನೆ ನೀಡಲಿದ್ದಾರೆ.
PublicNext
08/12/2021 08:51 pm