ಬೆಂಗಳೂರು: ಲಕ್ಕಸಂದ್ರದಲ್ಲಿ ಬಹುಮಹಡಿ ಕಟ್ಟಡ ನೋಡ ನೋಡುತ್ತಿದಂತೆಯೇ ಕುಸಿದು ಬಿದ್ದಿರುವ ಘಟನೆ ಬೆಂಗಳೂರಿಗರನ್ನು ಬೆಚ್ಚಿಬೀಳಿಸಿದೆ.
ಕಳೆದ ಎರಡು ವರ್ಷಗಳ ಹಿಂದೆ ಮನೆ ಬಾಗಿತ್ತು. ಆದರೂ ಮನೆ ಮಾಲೀಕರು ಅಲ್ಪ ಸ್ವಲ್ಪ ರಿಪೇರಿ ಮಾಡಿಸಿ ಬಾಡಿಗೆಗೆ ಕೊಟ್ಟಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಆದರೆ ಇಂದು ಬೆಳಗ್ಗೆ ಮನೆ ಮತ್ತೆ ಕುಸಿತವಾಗೋದಕ್ಕೆ ಆರಂಭವಾಗಿದ್ದು, ಕೂಡಲೇ ಮನೆಯಲ್ಲಿದ್ದ ಬಾಡಿಗೆದಾರರು ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ನೀಡಿದ್ದರು. ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಕಾರ್ಯಾಚರಣೆ ಶುರು ಮಾಡೋ ವೇಳೆಗೆ ಮನೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ.
ಮನೆ ಕುಸಿತವಾಗೋದಕ್ಕೂ ಮುನ್ನ ಮನೆಯಲ್ಲಿ ಇದ್ದವರೆಲ್ಲಾ ಹೊರಗೆ ಓಡಿ ಬಂದಿದ್ದಾರೆ. ಪರಿಣಾಮ ಸಂಭವನೀಯ ಪ್ರಮಾದ ತಪ್ಪಿದೆ. ಸದ್ಯ ಸ್ಥಳಕ್ಕೆ ಆಗಮಿಸಿರುವ ಸಿಬ್ಬಂದಿ ಮನೆ ತೆರವು ಕಾರ್ಯ ಆರಂಭ ಮಾಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಆದರೆ ಕಟ್ಟಡ ಕುಸಿತದಿಂದ ಅಕ್ಕ ಪಕ್ಕ ಮನೆಗಳಿಗೂ ದೊಡ್ಡ ಮಟ್ಟದ ಹಾನಿಯಾಗಿದೆ. ಮನೆಯಲ್ಲಿ ಮೆಟ್ರೋ ಕಾಮಗಾರಿ ಮಾಡುತ್ತಿದ್ದ 20ಕ್ಕೂ ಹೆಚ್ಚು ಕಾರ್ಮಿಕರು ಕುಸಿತವಾಗಿರೋ ಮನೆಯಲ್ಲಿ ವಾಸ ಮಾಡುತ್ತಿದ್ದರು.
ರಾತ್ರಿ ಏನಾದ್ರು ಕಟ್ಟಡ ಕುಸಿತ ಆಗಿದ್ದರೇ 40ಕ್ಕೂ ಹೆಚ್ಚು ಮಂದಿ ಸಾವನ್ನಪ್ಪುತ್ತಿದ್ದರು ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
PublicNext
27/09/2021 02:24 pm