ಚಿಕ್ಕಬಳ್ಳಾಪುರ: ಜಿಲ್ಲೆಯ ಚಿಂತಾಮಣಿ ತಾಲೂಕಿನ ಮರಿನಾಯನಕನಹಳ್ಳಿ ಗೇಟ್ ಬಳಿ ನಡೆದ ಅಪಘಾತದಲ್ಲಿ ನಿನ್ನೆ ರವಿವಾರಾ ಸ್ಥಳದಲ್ಲೇ ಆರು ಜನ ಮೃತರಾಗಿದ್ದರು. ಇಂದು ಸಾವಿನ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. 7 ಜನ ಪ್ರಯಾಣಿಸಬೇಕಾದ ಜೀಪ್‌ನಲ್ಲಿ ಒಟ್ಟು 17 ಜನ ಪ್ರಯಾಣಿಸಿದ್ದು ಈ ಅಪಘಾತಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ.
ಜೀಪ್ ಗೆ ಯಮಸ್ವರೂಪಿ ಲಾರಿಯೊಂದು ಡಿಕ್ಕಿ ಹೊಡೆದ ಪರಿಣಾಮ 8 ಮಂದಿ ಬಲಿಯಾಗಿದ್ದಾರೆ. ಇನ್ನೂ 8 ಮಂದಿ ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಓರ್ವ ಬಾಲಕ ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ಮೃತರನ್ನು ಚಿಂತಾಮಣಿ ನಗರದ ಸೊಣ್ಣಶೆಟ್ಟಿಗಳ್ಳಿಯ ನಾರಾಯಣಸ್ವಾಮಿ(55), ಚಿಂತಾಮಣಿ ತಾಲೂಕಿನ ಗೋಪಲ್ಲಿಯ ಮುನಿರತ್ನಮ್ಮ(49), ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡುವಿನ ಜೀಪ್ ಚಾಲಕ ರಮೇಶ್(45), ಆಂಧ್ರ ಮೂಲದ ನಾರನ್ನಗಾರಪಲ್ಲಿಯ ವೆಂಕಟಲಕ್ಷ್ಮಮ್ಮ(59), ಕಿತ್ತಗನೂರು ಗ್ರಾಮದ ಮುನಿಕೃಷ್ಣಪ್ಪ(49), ರಾಜಪ್ಪ(66), ಶ್ರೀನಿವಾಸಪುರ ಮೂಲದ ನಿಖಿಲ್(20) ಹಾಗೂ ಮೋನಿಕಾ(28) ಎಂದು ಗುರುತಿಸಲಾಗಿದೆ.
ರವಿವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಮರಿನಾಯಕನಹಳ್ಳಿ ಗೇಟ್ ಬಳಿ ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ರಾಯಲ್ಪಾಡು ವಿನಿಂದ ಚಿಂತಾಮಣಿ ನಗರಕ್ಕೆ ಕೆಎ-07 ಎಂ-2017 ನಂಬರಿನ ಜೀಪ್ ನಲ್ಲಿ ಚಾಲಕ ರಮೇಶ್ ಸೇರಿ 17 ಮಂದಿ ಪ್ರಯಾಣಿಸುತ್ತಿದ್ದರು. ಮರಿನಾಯಕನಹಳ್ಳಿ ಗೇಟ್ ಬಳಿ ಇನ್ನೊಂದು ವಾಹನ ಹಿಂದಿಕ್ಕುವ ಭರದಲ್ಲಿ ಬೆಂಗಳೂರು ರಸ್ತೆಯಿಂದ ಮದನಪಲ್ಲಿ ಕಡೆಗೆ ವೇಗವಾಗಿ ಮುನ್ನುಗುತ್ತಿದ್ದ ಎನ್.ಎಲ್-01 ಎಡಿ-2376 ನಂಬರಿನ ಸಿಮೆಂಟ್ ಲಾರಿ ಜೀಪ್ ಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಸ್ಥಳದಲ್ಲೇ 6 ಮಂದಿ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.
PublicNext
13/09/2021 07:37 am