ಹಾಸನ: ಫೋಟೋ ಗೀಳಿಗೆ ಒಳಗಾಗಿ ಯುವಕನೋರ್ವ ತನ್ನ ಜೀವವನ್ನೇ ಬಲಿಕೊಟ್ಟಿರುವ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.
ಜಲಪಾತದ ಬಳಿ ಫೋಟೋ ತೆಗೆಸಿಕೊಳ್ಳಲು ಹೋಗಿ ಕಾಲು ಜಾರಿ ಬಿದ್ದು ಯುವಕ ಸಾವನ್ನಪ್ಪಿದ್ದಾನೆ. ಸಕಲೇಶಪುರ ತಾಲೂಕಿನ ಕಾಡುಮನೆ ಸಮೀಪ ಗುಡಾಣಕೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ರತನ್ (26) ಎಂಬಾತನೇ ಮೃತಪಟ್ಟ ದುರ್ದೈವಿ. ರತನ್ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದ. ಗುರುವಾರ ರಾತ್ರಿಯಷ್ಟೇ ಬೆಂಗಳೂರಿನಿಂದ ಮಹಾಲಯ ಅಮಾವಾಸ್ಯೆ ಅಂಗವಾಗಿ ಊರಿಗೆ ಬಂದಿದ್ದ.
ತನ್ನ ಕುಟುಂಬದ ಇತರ ನಾಲ್ಕು ಜನ ಸಂಬಂಧಿಕರ ಜೊತೆ ಗುಡಾಣಕೆರೆ ಸಮೀಪವಿರುವ ಅಬ್ಬಿಗುಂಡಿ ಜಲಪಾತಕ್ಕೆ ಹೋಗಿದ್ದನು. ಈ ವೇಳೆ ಜೊತೆಯಲ್ಲಿದ್ದ ಒಬ್ಬರಿಗೆ ಮೊಬೈಲ್ ಕೊಟ್ಟು ಫೋಟೋ ತೆಗೆಸಿಕೊಳ್ಳುವಾಗ ಕಾಲು ಜಾರಿ ಮೇಲಿಂದ ಬಿದ್ದಿದ್ದಾನೆ.
ಇದರಿಂದ ತಲೆಗೆ ಬಲವಾದ ಪೆಟ್ಟು ಬಿದ್ದು, ರತನ್ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ.
ಘಟನಾ ಸ್ಥಳಕ್ಕೆ ಮುಳುಗು ತಜ್ಞರ ಸಮೇತ ಭೇಟಿ ನೀಡಿದ ಸಕಲೇಶಪುರ ಗ್ರಾಮಾಂತರ ಠಾಣೆ ಪೊಲೀಸರು ಮೃತದೇಹವನ್ನು ಮೇಲೆತ್ತಿ ದೂರು ದಾಖಲಿಸಿಕೊಂಡಿದ್ದಾರೆ.
PublicNext
18/09/2020 06:21 pm