ಬೆಂಗಳೂರು: ಮದ್ಯ ಸೇವಿಸಿ ಕಾರು ಚಾಲನೆ ಮಾಡಿ ಸರಣಿ ಅಪಘಾತ ಮಾಡಿರುವ ಅಮಾನವೀಯ ಘಟನೆಯೊಂದು ಬೆಂಗಳೂರಿನ ರಿಚ್ಮಂಡ್ ವೃತ್ತದಲ್ಲಿ ಗುರುವಾರ ರಾತ್ರಿ ನಡೆದಿದೆ.
ಮದ್ಯ ಸೇವಿಸಿ ವಾಹನ ಚಲಾಯಿಸುತ್ತಿದ್ದ ಆರೋಪಿಯನ್ನು ರೋಹಿತ್ ಕೇಡಿಯಾ ಎಂದು ಗುರುತಿಸಲಾಗಿದ್ದು,ಈ ಸರಣಿ ಅಪಘಾತದಲ್ಲಿ ಇನ್ಶೂರೆನ್ಸ್ ಕಂಪನಿಯಲ್ಲಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದ ಕಿರಣ್ (23) ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಮತ್ತೋರ್ವ ಕಾರು ಚಾಲಕ ಶ್ರೀಕಾಂತ್‍ಗೆ ಗಾಯವಾಗಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಮಧ್ಯರಾತ್ರಿ ರೋಹಿತ್ ಕೇಡಿಯಾ ಕಂಠಪೂರ್ತಿ ಕುಡಿದು ಕಾರು ಓಡಿಸಿಕೊಂಡು ಬಂದಿದ್ದಾನೆ. ನಂತರ ರಿಚ್ಮಂಡ್ ವೃತ್ತದ ಸಿಗ್ನಲ್ ಅಲ್ಲಿ ನಿಂತಿದ್ದ ಕಿರಣ್ ಬೈಕಿಗೆ ಡಿಕ್ಕಿ ಹೊಡೆದಿದ್ದಾನೆ. ಪರಿಣಾಮ ಕಿರಣ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ನಂತರ ಕಾರು ನಿಯಂತ್ರಣಕ್ಕೆ ಸಿಗದೆ, ಮೊತ್ತೊಂದು ಕಾರಿಗೂ ಡಿಕ್ಕಿ ಆಗಿದೆ. ಅದರಲ್ಲಿದ್ದ ಡ್ರೈವರ್ ಶ್ರೀಕಾಂತ್‍ಗೆ ಗಂಭೀರವಾಗಿ ಗಾಯವಾಗಿದ್ದು, ಆತನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ.
ಆರೋಪಿ ರೋಹಿತ್ ಕೇಡಿಯಾನನ್ನು ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ನ್ಯಾಯಾಧೀಶರು ಆರೋಪಿಯನ್ನು 14 ದಿನ ನ್ಯಾಯಾಂಗ ಬಂಧನಕ್ಕೊಪ್ಪಿಸಿ ಆದೇಶ ನೀಡಿದ್ದಾರೆ. ಈ ಸಂಬಂಧ ವಿಲ್ಸನ್ ಗಾರ್ಡನ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ಮದ್ಯದ ಜೊತೆಗೆ ಡ್ರಗ್ಸ್ ತೆಗೆದುಕೊಂಡಿರುವ ಅನುಮಾನ ವ್ಯಕ್ತವಾಗಿದೆ. ಹೀಗಾಗಿ ಆರೋಪಿಯ ರಕ್ತದ ಮಾದರಿ ಸಂಗ್ರಹಿಸಿ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ಪೊಲೀಸರು ರವಾನೆ ಮಾಡಿದ್ದಾರೆ.
PublicNext
18/09/2020 02:12 pm