ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪ್ರಯಾಗ್‌ರಾಜ್‌ನಲ್ಲಿರುವ ತ್ರಿವೇಣಿ ಸಂಗಮ ಏಕೆ ಅಷ್ಟೊಂದು ಶ್ರೇಷ್ಠ?

ಉತ್ತರಾಖಂಡ ರಾಜ್ಯದ ಶ್ರೀ ಕ್ಷೇತ್ರ ಬದರಿನಾಥದಿಂದ ಮೇಲೆ ಸಾತೋಪತ್ ಹಿಮಾನಿ ಎನ್ನುವ ಸ್ಥಳದಿಂದ ಎರಡು ಪುಟ್ಟ ಪುಟ್ಟ ನದಿಗಳು ಉಗಮವಾಗುತ್ತವೆ. ಅವರು ವಿಷ್ಣುಗಂಗಾ ಮತ್ತು ದೌಲಿಗಂಗಾ.!

ಈ ಎರಡು ನದಿಗಳು ಹರಿದು ಮುಂದೆ ಬಂದು ಒಂದರೊಳಗೊಂದು ಸಂಗಮವಾಗುತ್ತವೆ. ಇದು ಮೊಟ್ಟ ಮೊದಲ ಸಂಗಮ ಕ್ಷೇತ್ರ ವಿಷ್ಣು ಪ್ರಯಾಗ. ಎರಡು ನದಿಗಳು ಸಂಗಮವಾದಾಗ ಯಾವ ನದಿಯ ಆಳ ಹೆಚ್ಚಾಗಿರುತ್ತದೆಯೋ ಆ ನದಿಯ ಹೆಸರಿನಿಂದ ಮುಂದಿನ ನದಿಯನ್ನು ಗುರುತಿಸುತ್ತಾರೆ. ಎರಡು ನದಿಗಳ ಆಳ ಸಮಸಮವಾಗಿದ್ದರೆ ಮುಂದಿನ ಹರಿವಿಗೆ ಹೊಸ ಹೆಸರನ್ನು ಇಡುತ್ತಾರೆ. ವಿಷ್ಣು ಪ್ರಯಾಗದಲ್ಲಿ ವಿಷ್ಣುಗಂಗಾ ಮತ್ತು ದೌಲಿಗಂಗಾ ಈ ಎರಡು ನದಿಗಳ ಆಳ ಹೆಚ್ಚು ಕಡಿಮೆ ಸಮ ಸಮವಾಗಿರುವುದರಿಂದ ಮುಂದೆ ಈ ನದಿಯನ್ನು ಅಲಕಾನಂದ ಎಂದು ಕರೆಯುತ್ತಾರೆ.

ಅಲಕಾನಂದ ನದಿಯು ಮುಂದೆ ಹರಿದು ಬರುವಾಗ ನಂದಾಕಿನಿ ನದಿ ಎಡ ಭಾಗದ ಕಡೆಯಿಂದ ಹರಿದು ಬಂದು ಅಲಕಾನಂದ ನದಿಯೊಳಗೆ ಲೀನವಾಗಿ ಬಿಡುತ್ತಾಳೆ. ಆ ಜಾಗ ನಂದ ಪ್ರಯಾಗ. ಅಲಕಾನಂದ ನದಿಯು ನಂದಾಕಿನಿ ನದಿಯೊಡನೆ ಕೂಡಿಕೊಂಡು ಮುಂದೆ ಹರಿದು ಬರುವಾಗ ಅಲಕಾನಂದ ನದಿಯ ಮಡಿಲಿಗೆ ಪಿಂಡಾರ ನದಿ ಬಂದು ಸೇರುತ್ತಾಳೆ. ಈ ಜಾಗವನ್ನು ಕರ್ಣ ಪ್ರಯಾಗ ಎಂದು ಹೆಸರಿಸಿದ್ದಾರೆ.

ಈ ಅಲಕಾನಂದ ನದಿ ಮುಂದೆ ಹರಿದು ಸಾಗುವಾಗ ಕೇದಾರನಾಥದಲ್ಲಿ ಉಗಮವಾಗಿ ಬಹಳ ಗಂಭೀರವಾಗಿ ಹರಿದು ಬಂದು ಅಲಕಾನಂದೆಯಲ್ಲಿ ಲೀನವಾಗುವುದು ಮಂದಾಕಿನಿ. ಅಲಕಾನಂದ ಮತ್ತು ಮಂದಾಕಿನಿಯ ಸಂಗಮ ಸ್ಥಳ ರುದ್ರ ಪ್ರಯಾಗ ಎಂದು ಪ್ರಸಿದ್ಧವಾಗಿದೆ. ನಂದಾಕಿನಿ ಪಿಂಡಾರ ಮತ್ತು ಮಂದಾಕಿನಿ ಈ ಮೂರು ನದಿಗಳ ಆಳ ಅಲಕಾನಂದ ನದಿಯ ಆಳಕ್ಕಿಂತ ಕಡಿಮೆ ಇರುವುದರಿಂದ ಈ ನದಿಗಳು ಅಲಕಾನಂದ ನದಿಯೊಡನೆ ಸಂಗಮವಾದ ತಕ್ಷಣ ಅವುಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಳ್ಳುತ್ತವೆ ಮತ್ತು ಮುಂದೆ ಅವುಗಳನ್ನು ಅಲಕಾನಂದ ಎಂದೇ ಗುರುತಿಸುತ್ತಾರೆ.

ಉತ್ತರಾಖಂಡದ ಮತ್ತೊಂದು ಭಾಗ ಉತ್ತರಕಾಶಿಯಲ್ಲಿರುವ ಗಂಗೋತ್ರಿಯ ಗೋಮುಖದಿಂದ ಭಾಗೀರಥಿ ನದಿ ಉದ್ಭವಿಸಿ ಅಲಕಾನಂದ ಇರುವಡೆಗೆ ಧಾವಿಸಿ ಬರುತ್ತಾಳೆ.

ಹೀಗೆ ಧಾವಿಸಿ ಬಂದ ಭಾಗೀರಥಿ ನದಿ ಮತ್ತು ಅಲಕಾನಂದ ನದಿ ಒಂದರೊಳಗೊಂದು ಸಂಗಮವಾಗುವ ಕ್ಷೇತ್ರವೇ ದೇವ ಪ್ರಯಾಗ. ದೇವ ಪ್ರಯಾಗದಲ್ಲಿ ಸಂಗಮವಾಗುವ ಭಾಗೀರಥಿ ಮತ್ತು ಅಲಕಾನಂದ ನದಿಗಳ ಆಳ ಸಮವಾಗಿರುವುದರಿಂದ ದೇವ ಪ್ರಯಾಗದಲ್ಲಿ ಅಲಕಾನಂದ ಮತ್ತು ಭಾಗೀರಥಿ ನದಿಗಳು ತಮ್ಮ ಅಸ್ತಿತ್ವವನ್ನು ಕಳೆದುಕೊಂಡು ಮುಂದೆ ಗಂಗಾ ನದಿಯಾಗಿ ಹರಿಯುತ್ತದೆ. ಈ ಐದು ಕ್ಷೇತ್ರಗಳನ್ನು ಅಂದರೆ ವಿಷ್ಣು ಪ್ರಯಾಗ, ನಂದ ಪ್ರಯಾಗ, ಕರ್ಣ ಪ್ರಯಾಗ, ರುದ್ರ ಪ್ರಯಾಗ ಮತ್ತು ದೇವ ಪ್ರಯಾಗಗಳನ್ನು ಕೂಡಿಸಿ ಪಂಚ ಪ್ರಯಾಗ ಎಂದೇ ಗುರುತಿಸುತ್ತಾರೆ. ಹೀಗೆ ಹಲವು ನದಿಗಳು ಕೂಡಿ ಗಂಗಾ ನದಿಯಾಗಿ ಗಿರಿ ಪರ್ವತಗಳ ಸಾಲಿನಿಂದ ಗಂಗೆ ಹೃಷಿಕೇಶಕ್ಕೆ ಇಳಿದು ಬರುತ್ತಾಳೆ.

ಹೃಷಿಕೇಶ ಹರಿದ್ವಾರವನ್ನು ಹಾದು ಮುಂದೆ ಬರುವ ಗಂಗಾ ಮಾತೆ ಯಮುನೋತ್ರಿಯಲ್ಲಿ ಉದ್ಭವಿಸುವ ಯಮುನಾ ನದಿ ಜೊತೆ ಸಂಗಮವಾಗುವ ಜಾಗ ಪ್ರಯಾಗಗಳಲ್ಲಿ ಅತ್ಯುನ್ನತವಾದ ಕ್ಷೇತ್ರ ಪ್ರಯಾಗಗಳಲ್ಲೇ ರಾಜ.

ಪ್ರಯಾಗರಾಜ್ ಗಿರಿ ಕಂದರಗಳ ನಡುವೆ ಉಗಮವಾಗಿ ಗಂಗಾ ನದಿಯಾಗಿ ಹರಿದು ಬರುವ ಈ ನೀರಿನಲ್ಲಿ ಬ್ಯಾಕ್ಟೀರಿಯೋಫೇಜ್ ಅಂದರೆ ಬ್ಯಾಕ್ಟೀರಿಯಾ ಭಕ್ಷಕನಿರುತ್ತಾನೆ ಇದೇ ಕಾರಣದಿಂದಾಗಿ ಗಂಗಾನದಿಯ ನೀರು ಬಹಳ ಪರಿಶುದ್ಧವಾಗಿರುತ್ತದೆ. ಈ ಗಂಗೆಯ ನೀರನ್ನು ಶೇಖರಿಸಿ ತಂದು ಮನೆಯಲ್ಲಿಟ್ಟುಕೊಂಡರೆ ವರ್ಷಗಳು ಕಳೆದರೂ ನೀರು ಕೆಡುವುದಿಲ್ಲ. ಇಂತಹ ಪರಿಶುದ್ಧವಾದ ಮತ್ತು ಅಮೃತ ಸಮಾನವಾದ ಗಂಗೆಯಲ್ಲಿ ಮಿಂದು, ಗಂಗಾ ಪಾನ ಮಾಡುವ ನಮ್ಮ ಸಾಧು ಸಂತರ ಜೊತೆ ಸೇರಿ ನಾವು ಮಾಡುವ ದಿವ್ಯ ಸ್ನಾನವೇ ಭವ್ಯ ಕುಂಭ ಸ್ನಾನ. ಅದುವೇ ಮಹಾ ಕುಂಭದ ಸಂಭ್ರಮ. ಅದು ನಮ್ಮ ದೇಹದ ಹೊರಗಿನ ಮತ್ತು ಒಳಗಿನ ಮಲಿನವನ್ನು ಸಂಪೂರ್ಣವಾಗಿ ತೊಳೆದು ಹಾಕುವ ಒಂದು ವಿಧಾನ. ಈ ಎಲ್ಲಾ ವಿಷಯಗಳು ತಿಳಿಯದೆ ಇರುವವರು ಕುಂಭಮೇಳ ಎನ್ನುವುದೊಂದು ಮೌಡ್ಯ ಎಂದು ಎಲ್ಲರನ್ನೂ ದಾರಿ ತಪ್ಪಿಸುತ್ತಿರುತ್ತಾರೆ.

ಲೇಖನ: ಮಧು

Edited By : Vijay Kumar
PublicNext

PublicNext

12/02/2025 10:34 am

Cinque Terre

58.4 K

Cinque Terre

6