", "articleSection": "Politics,Crime,Law and Order", "image": { "@type": "ImageObject", "url": "https://prod.cdn.publicnext.com/s3fs-public/387839-1738236985-Untitled-design---2025-01-30T170442.167.jpg", "height": 710, "width": 1242 }, "datePublished": "2020-09-10T08:59:00+05:30", "dateModified": "2020-09-10T08:59:37+05:30", "author": { "@type": "Person", "name": "PublicNext" }, "editor": { "@type": "Person", "name": "abhishek.kamoji" }, "publisher": { "@type": "Organization", "name": "PublicNext", "logo": { "@type": "ImageObject", "url": "//live-publicnext.s3.ap-south-1.amazonaws.com/publicnextsite/assets/img/landing/Logo.png", "width": 97, "height": 45 } }, "description": "ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ರಾಮನಗರದ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರಕಾರಿ ಜಮೀನು...Read more" } ", "keywords": "HDK's land scam case and the High Court's response.,,Politics,Crime,Law-and-Order", "url": "https://publicnext.com/node" }
ಬೆಂಗಳೂರು: ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಚಿವ ಡಿ.ಸಿ.ತಮ್ಮಣ್ಣ ರಾಮನಗರದ ಕೇತಗಾನಹಳ್ಳಿ ವ್ಯಾಪ್ತಿಯಲ್ಲಿ 14 ಎಕರೆ ಸರಕಾರಿ ಜಮೀನು ಒತ್ತುವರಿ ತೆರವುಗೊಳಿಸದ ಅಧಿಕಾರಿಗಳ ವಿರುದ್ಧ ಹೈಕೋರ್ಟ್ ಚಾಟಿ ಬೀಸಿದೆ.
ಅರ್ಜಿ ವಿಚಾರಣೆ ವೇಳೆ ಖುದ್ದು ಹಾಜರಿದ್ದ ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಅವರಿಗೆ ಹೈಕೋರ್ಟ್ ನೀಡಿದ ಕಠಿಣ ಎಚ್ಚರಿಕೆ ಇದು.
ಪ್ರತಿವಾದಿಗಳಾದ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಮತ್ತು ಸಂಬಂಧಿಗಳು ತುಂಬಾ ಉನ್ನತ ಹುದ್ದೆಯಲ್ಲಿ ಇದ್ದಾರೆ ಅಂದುಕೊಂಡು ನೀವು ಐದು ವರ್ಷ ಏನೂ ಮಾಡಿಲ್ಲ ತಾನೆ..? ಇನ್ನೆರಡು ವಾರ ಸಮಯ ಕೊಡುತ್ತೇನೆ. ಅಷ್ಟರೊಳಗೆ ನಿಮ್ಮ ಕೈಲಿ ಆಗುತ್ತೆ ಅಂದ್ರೆ ಹೇಳಿ, ಇಲ್ಲಾ ಅಸಮರ್ಥರಿದ್ದೀವಿ ಅಂದ್ರೆ ನಿಮ್ಮನ್ನು ಎಲ್ಲಿಗೆ ಕಳಿಸಬೇಕೊ ಅಲ್ಲಿಗೇ ಕಳಿಸುತ್ತೇನೆ. ಹದಿನೈದು ದಿನ ಜೈಲಿನಲ್ಲಿ ಇದ್ದು ಬಂದ್ರೆ, ಸರಿಹೋಗ್ತೀರಿ...!
‘ಭೂ ಕಬಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ನೀಡಿರುವ ಆದೇಶ ಜಾರಿಗೊಳಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ’ ಎಂದು ಆಕ್ಷೇಪಿಸಿ ಎಸ್.ಆರ್.ಹಿರೇಮಠ ನೇತೃತ್ವದ ‘ಸಮಾಜ ಪರಿವರ್ತನಾ ಸಮುದಾಯ’ ಸಲ್ಲಿಸಿರುವ ಸಿವಿಲ್ ನ್ಯಾಯಾಂಗ ನಿಂದನೆ ಅರ್ಜಿಯನ್ನು ನ್ಯಾಯಮೂರ್ತಿ ಕೆ.ಸೋಮಶೇಖರ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಬುಧವಾರ ವಿಚಾರಣೆ ನಡೆಸಿತು.
ಈ ಹಿಂದಿನ ವಿಚಾರಣೆ ವೇಳೆ, ‘ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಖುದ್ದು ಹಾಜರಿರಬೇಕು’ ಎಂದು ನ್ಯಾಯಪೀಠ ಆದೇಶಿಸಿತ್ತು. ಅದರಂತೆ ಬುಧವಾರ ರಾಜೇಂದ್ರ ಕುಮಾರ ಕಠಾರಿಯಾ ಖುದ್ದು ಹಾಜರಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೈಗೊಂಡಿರುವ ಕ್ರಮಗಳ ಬಗ್ಗೆ ವಿವರಿಸಲು ಮುಂದಾದರು.
ಆಗ ನ್ಯಾಯಮೂರ್ತಿ ಸೋಮಶೇಖರ್, ‘ಕೆ.ವಾಸುದೇವನ್ v/s ಟಿ.ಆರ್.ಧನಂಜಯ ಮೊಕದ್ದಮೆಯಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿನಂತೆ ನ್ಯಾಯಾಂಗ ನಿಂದನೆ ಮೊಕದ್ದಮೆಗಳಲ್ಲಿ ಆಡಳಿತಾಂಗಕ್ಕೆ ಕಿಂಚಿತ್ತೂ ಕರುಣೆ ತೋರಬಾರದು ಎಂದಿದೆ. ನಿಮ್ಮ ವಿರುದ್ಧ ಈಗಲೇ ನ್ಯಾಯಾಂಗ ನಿಂದನೆಯ ದೋಷಾರೋಪ ನಿಗದಿಗೊಳಿಸುವ ಪ್ರಕ್ರಿಯೆಗೆ ತಿದಿ ಒತ್ತುತ್ತೇನೆ, ಎಚ್ಚರವಿರಲಿ, ನೀವು ನೆಪ ಹೇಳಿ ತಪ್ಪಿಸಿಕೊಳ್ಳಲು ಚಾನ್ಸೇ ಇಲ್ಲ. ವ್ಯವಸ್ಥೆ ನೋಡಿ ಜನ ನಗ್ತಾ ಇದ್ದಾರೆ ಗೊತ್ತಾ? ನೀವೆಲ್ಲಾ ಕೋರ್ಟ್ ಆದೇಶಗಳನ್ನು ಪಾಲನೆ ಮಾಡುವತನಕ ನಿಮ್ಮ ಸಂಬಳ ಕಟ್ ಮಾಡಿದರೆ ಗೊತ್ತಾಗುತ್ತದೆ’ ಎಂದು ಹರಿಹಾಯ್ದರು.
ಮಧ್ಯೆ ಮಧ್ಯೆ ಕಠಾರಿಯಾ ಅವರು ಶಾಂತಚಿತ್ತರಾಗಿ ನ್ಯಾಯಪೀಠಕ್ಕೆ ತಮ್ಮ ವಿವರಣೆ ನೀಡಲು ಮುಂದಾಗಲೆಲ್ಲಾ ನ್ಯಾ.ಸೋಮಶೇಖರ್, ‘ಬ್ಯುರೋಕ್ರಾಟ್ಗಳಿಗೆ ನ್ಯಾಯಾಂಗದ ಭಾಷೆಯೇ ಅರ್ಥವಾಗುತ್ತಿಲ್ಲ. ನೋಡಿ ನೀವು ಹೇಳಿದ್ದನ್ನೆಲ್ಲಾ ನಾನು ಬರೆದುಕೊಳ್ತೇನೆ. ಸತ್ಯ ಹೇಳಿದ್ರೂ ಸರಿ, ಸುಳ್ಳು ಹೇಳಿದ್ರೂ ಸರಿ.
ನಾನು ನಿಮ್ಮೆಲ್ಲರ ನಾಡಿಮಿಡಿತ ಅರ್ಥ ಮಾಡಿಕೊಳ್ಳಬಲ್ಲೆ. ಈ ಬೆಂಚ್ ಅಷ್ಟು ಸುಲಭದ್ದಲ್ಲ, ನೆನಪಿರಲಿ. ಅವಕಾಶ ಸಿಕ್ರೆ ನಿಮ್ಮನ್ನೆಲ್ಲಾ ಫಿಕ್ಸ್ ಮಾಡಿಬಿಡ್ತೀನಿ’ ಎಂದು ಅಬ್ಬರಿಸಿದರು.
ಒಂದು ಹಂತದಲ್ಲಿ ಕಠಾರಿಯಾ, ‘ಸರ್, ವ್ಯವಸ್ಥೆ ತುಂಬಾ ಕೆಟ್ಟದಾಗಿದೆ. ಆದರೂ, ಸರ್ಕಾರ ತನ್ನೆಲ್ಲಾ ಪ್ರಯತ್ನ ಮಾಡುತ್ತಿದೆ. ಕಳೆದ ಒಂದು ವರ್ಷದಲ್ಲಿ ನಾವು 14 ಎಕರೆಗೂ ಹೆಚ್ಚು ಅಕ್ರಮಿತ ಸರ್ಕಾರಿ ಭೂಮಿಯನ್ನು ವಶಕ್ಕೆ ಪಡೆದಿದ್ದೇವೆ. ಸಮಗ್ರ ಮತ್ತು ನಿಷ್ಪಕ್ಷಪಾತ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಎಸ್ಐಟಿ ರಚನೆ ಮಾಡಿದ್ದೇವೆ. ಭ್ರಷ್ಟಾಚಾರ ನಿರ್ಮೂಲನೆಗೆ ಶ್ರಮಿಸುತ್ತಿದ್ದೇವೆ’ ಎಂದರು.
ಇದಕ್ಕೆ ದನಿಗೂಡಿಸಿದ ಹೆಚ್ಚುವರಿ ಅಡ್ವೊಕೇಟ್ ಜನರಲ್ ಕಿರಣ್ ವಿ.ರೋಣ ಅವರು, ‘ಹೌದು ಸ್ವಾಮಿ. ಇವರು ಕಂದಾಯ ಇಲಾಖೆಯ ಸುಧಾರಣೆಗೆಂದೇ ಇ–ಖಾತಾ ವ್ಯವಸ್ಥೆ ರೂಪಿಸಿದ್ದಾರೆ’ ಎಂದರು. ಈ ಮಾತಿಗೆ ಕನಲಿ ಕೆಂಡವಾದ ನ್ಯಾ.ಸೋಮಶೇಖರ್, ‘ಇ–ಖಾತಾ ಎಂಬುದೇ ಭ್ರಷ್ಟಾಚಾರದ ಆಗರ. ನಮ್ಮಲ್ಲಿ ಮಾನಸಿಕ ಭ್ರಷ್ಟಾಚಾರ, ಪೂರ್ವಗ್ರಹಪೀಡಿತ ಭಾವನೆಗಳ ಭ್ರಷ್ಟಾಚಾರ, ಹಣದ ಭ್ರಷ್ಟಾಚಾರ... ಎಂಬೆಲ್ಲಾ ಶ್ರೇಣೀಕೃತ ವ್ಯವಸ್ಥೆಯಿದೆ. ಮೊದಲು ಪೂರ್ವಗ್ರಹಪೀಡಿತ ಭಾವನೆಗಳ ಭ್ರಷ್ಟ ಪರಿಧಿಯಿಂದ ಹೊರಬನ್ನಿ’ ಎಂದರು.
‘ಹೈಕೋರ್ಟ್ ಆದೇಶದ ಅನುಪಾಲನೆಗೆ ಮೂರು ತಿಂಗಳಾದರೂ ಕಾಲಾವಕಾಶ ನೀಡಬೇಕು’ ಎಂದು ಕಿರಣ್ ರೋಣ ಕೋರಿದರು. ಆದರೆ, ನ್ಯಾ.ಸೋಮಶೇಖರ್ ರೋಣ ಅವರ ಮನವಿಯನ್ನು ಸಾರಾಸಗಟಾಗಿ ಆಕ್ರೋಶದಿಂದ ತಳ್ಳಿ ಹಾಕಿದರು. ವಿಚಾರಣೆಯನ್ನು ಫೆಬ್ರುವರಿ 21ಕ್ಕೆ ಮುಂದೂಡಲಾಗಿದೆ.
PublicNext
30/01/2025 05:06 pm