ಮೈಸೂರು: ಇಡೀ ದೇಶದ ಮೂಲೆ ಮೂಲೆಯಲ್ಲಿ 76ನೇ ವರ್ಷದ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಆಚರಣೆ ಮಾಡಿದ್ದಾರೆ. ಆದರೆ ಮೈಸೂರು ಜಿಲ್ಲೆಯ ಸರಗೂರು ತಾಲ್ಲೂಕಿನ ಹೆಗ್ಗನೂರು ಗ್ರಾಮ ಪಂಚಾಯಿತಿಯಲ್ಲಿ ಆಚರಣೆ ಕೈ ಬಿಟ್ಟಿದ್ದಾರೆ. ಸಂವಿಧಾನ ಜಾರಿಗೆ ಬಂದ ದಿನವನ್ನು ಆಚರಿಸದೆ ಅಧಿಕಾರಿಗಳು ಸಂವಿಧಾನಕ್ಕೆ ಅಪಮಾನ ಮಾಡಿ ಸ್ಥಳೀಯರ ಆಕ್ರೋಶಕ್ಕೆ ಸಿಲುಕಿದ್ದಾರೆ.
ಸಹಜವಾಗಿ ಸರ್ಕಾರಿ ಕಚೇರಿಗಳಲ್ಲಿ ತ್ರಿವರ್ಣ ಧ್ವಜವನ್ನು ಹಾರಿಸಿ ಭಕ್ತಿಪೂರ್ವಕವಾಗಿ ನಮಿಸಿ ಗಣರಾಜ್ಯೋತ್ಸವವನ್ನ ಆಚರಣೆ ಮಾಡಬೇಕು. ಆದ್ರೆ ಸರಗೂರು ತಾಲ್ಲೂಕಿನ ಹೆಗ್ಗನೂರು ಗ್ರಾಮ ಪಂಚಾಯ್ತಿಗೆ ಇದರ ಮಹತ್ವವೇ ಗೊತ್ತಿಲ್ಲದಂತೆ ವರ್ತಿಸಿದ್ದಾರೆ. ತ್ರಿವರ್ಣ ಧ್ವಜವನ್ನ ಸಿದ್ಧಪಡಿಸಿ ನಿಯಮಾನುಸಾರ ಹಾರಿಸದೆ ಅನಾಥವಾಗಿ ಬಿಟ್ಟಿದ್ದಾರೆ. ಗ್ರಾಮ ಪಂಚಾಯ್ತಿ ಪಿಡಿಒ ವಿರುದ್ಧ ಸಿಡಿದೆದ್ದ ಸ್ಥಳೀಯರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ಆಚರಣೆಗೆ ಸಂಬಂಧಿಸಿದಂತೆ ಒಂದು ಮೆಮೋ ಸಹ ಹೊರಡಿಸಿಲ್ಲವೆಂದು ತಿಳಿದು ಬಂದಿದೆ.
ಈ ಬಗ್ಗೆ ಸ್ಥಳೀಯರು ಪಿಡಿಒಗೆ ಪ್ರಶ್ನಿಸಿದಾಗ ಎರಡು ಗ್ರಾಮ ಪಂಚಾಯ್ತಿಗೆ ನಾನೊಬ್ಬನೇ ಉಸ್ತುವಾರಿ. ಆದ್ದರಿಂದ ಬೇರೆ ಗ್ರಾಮ ಪಂಚಾಯ್ತಿಯಲ್ಲಿ ಆಚರಿಸಿ ಬಂದಿರುವುದಾಗಿ ತಿಳಿಸಿದ್ದಾನೆ. ಆದರೂ ಮಧ್ಯಾಹ್ನ 2 ಗಂಟೆ ದಾಟಿದ್ರೂ ಬಾವುಟ ಹಾರುವ ಭಾಗ್ಯ ಕಂಡಿಲ್ಲ. ಕೆಲವು ಸ್ಥಳೀಯರಂತೂ ಮಕ್ಕಳನ್ನು ಧ್ವಜಸ್ಥಂಬದ ಬಳಿ ನಿಲ್ಲಿಸಿ ಪಿಡಿಒ ವಿರುದ್ಧ ಧಿಕ್ಕಾರ ಕೂಗಿದ್ದಾರೆ. ತ್ರಿವರ್ಣ ಧ್ವಜ ಹಾರಿಸದೇ ಸಂವಿಧಾನಕ್ಕೆ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ರವರಿಗೆ ಅವಮಾನ ಮಾಡಿರುತ್ತಾರೆಂದು ಆರೋಪಿಸುವ ಸ್ಥಳೀಯರು ಕಠಿಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
PublicNext
27/01/2025 08:43 am