ಯಲ್ಲಾಪುರ : ತಾಲೂಕಿನ ಅರಬೈಲ್ ಗ್ರಾಮದಲ್ಲಿ ಬುಧವಾರ ನಡೆದ ಭೀಕರ ಲಾರಿ ಅಪಘಾತ ಘಟನೆ ನಡೆದ ಸ್ಥಳಕ್ಕೆ ರಾಜ್ಯ ಸಂಚಾರ ಮತ್ತು ಸುರಕ್ಷತಾ ಎಡಿಜಿಪಿ ಶರತ್ ಚಂದ್ರ ಕೆ.ವಿ ಅವರು ಬುಧವಾರ ರಾತ್ರಿ ಭೇಟಿ ನೀಡಿದರು.
ಪೊಲೀಸ್ ಮತ್ತು ಹೆದ್ದಾರಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಅಪಘಾತ ಸ್ಥಳವನ್ನು ಪರಿಶೀಲನೆ ನಡೆಸಿದ ಅವರು, ಮಾಧ್ಯಮದವರೊಂದಿಗೆ ಮಾತನಾಡಿ, ಲಾರಿ ಚಾಲಕನ ನಿರ್ಲಕ್ಷ್ಯದಿಂದ ಅಪಘಾತ ನಡೆದಿರುವ ಸಾಧ್ಯತೆ ಇದೆ. ಚಾಲಕನು ನಿದ್ದೆಯ ಮಂಪರಿನಲ್ಲಿ ಅತೀ ವೇಗವಾಗಿ ಚಲಾಯಿಸಿ ವಿದ್ಯುತ್ ಕಂಬಕ್ಕೆ ಡಿಕ್ಕಿಹೊಡೆದ ಪರಿಣಾಮ ಅಪಘಾತ ಸಂಭವಿಸಿರಬಹುದು ಎಂದು ಮೇಲ್ನೋಟಕ್ಕೆ ಕಂಡುಬಂದಿದೆ.
ಲಾರಿಯ ಬ್ರೇಕ್ ಫೇಲ್ ಆಗಿಲ್ಲ, ಟೈರ್ ಸ್ಫೋಟ ಆಗಿಲ್ಲ, ಲಾರಿಯಲ್ಲಿ ಯಾವುದೇ ತಾಂತ್ರಿಕ ಸಮಸ್ಯೆ ಕಂಡುಬಂದಿಲ್ಲ ಎಂದು ಗೊತ್ತಾಗಿದೆ.
ಲಾರಿಯಲ್ಲಿ ಒಟ್ಟೂ 29 ಜನರು ಪ್ರಯಾಣಿಸುತ್ತಿದ್ದರು. ಸರಕು ಸಾಗಾಣಿಕಾ ಲಾರಿಯಲ್ಲಿ ಜನರನ್ನು ಸಾಗಿಸುವದೂ ಅಪರಾಧವಾಗಿದೆ. ಎಲ್ಲ ಆಯಾಮಗಳಿಂದಲೂ ತನಿಖೆ ನಡೆಯುತ್ತಿದೆ ಎಂದರು.
ಇಂತಹ ಅಪಘಾತಗಳನ್ನು ತಡೆಯುವ ನಿಟ್ಟಿನಲ್ಲಿ ಹೆದ್ದಾರಿಯ ಇಕ್ಕೆಲಗಳಲ್ಲಿ ತಡೆಗೋಡೆ ನಿರ್ಮಿಸುವ ಬಗ್ಗೆ ಇಲಾಖೆಯಿಂದ ಪ್ರಸ್ತಾವನೆ ಸಲ್ಲಿಸಲು ಎಸ್ಪಿಯವರಿಗೆ ಸೂಚಿಸಲಾಗಿದೆ ಎಂದು ಮಾಹಿತಿ ನೀಡಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ.ನಾರಾಯಣ, ಡಿವೈಎಸ್ಪಿ ಶಿವಾನಂದ, ವಿಧಿವಿಜ್ಞಾನ ಪ್ರಯೋಗಾಲಯದ ಸಕಲೇಶ ಕಾಡ್ಲೂರು, ಹೆದ್ದಾರಿ ಇಲಾಖೆಯ ಅಧಿಕಾರಿ ಮಹೇಶ ನಾಯ್ಕ, ಸಿಪಿಐ ರಮೇಶ ಹಾನಾಪುರ ಮುಂತಾದವರು ಇದ್ದರು.
Kshetra Samachara
23/01/2025 07:31 am