ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬೀದರ್ ATM ದರೋಡೆಕೋರರಿಂದ ಹೈದರಾಬಾದ್‌ನಲ್ಲೂ ಶೂಟೌಟ್ - ಓರ್ವನಿಗೆ ಗಾಯ, ಬೆನ್ನತ್ತಿದ ಪೊಲೀಸರು!

ಹೈದರಾಬಾದ್: ಕರ್ನಾಟಕದ ಬೀದರ್‌ನಲ್ಲಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿ ಎಟಿಎಂಗೆ ಹಾಕಬೇಕಿದ್ದ 93 ಲಕ್ಷ ರೂ ದರೋಡೆ ಮಾಡಿ ತೆಲಂಗಾಣಕ್ಕೆ ಪರಾರಿಯಾಗಿದ್ದ ದರೋಡೆಕೋರರು ಹೈದರಾಬಾದ್‌ನಲ್ಲೂ ಶೂಟೌಟ್ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಮೂಲಗಳ ಪ್ರಕಾರ ಕರ್ನಾಟಕದಿಂದ ತಪ್ಪಿಸಿಕೊಂಡು ತೆಲಂಗಾಣಕ್ಕೆ ಪರಾರಿಯಾಗಿದ್ದ ದರೋಡೆಕೋರರ ತಂಡ ತೆಲಂಗಾಣ ರಾಜಧಾನಿ ಹೈದರಾಬಾದ್‌ನ ಅಫ್ಜಲ್ ಗಂಜ್‌ನಲ್ಲಿರುವ ಒಂದು ಟ್ರಾವೆಲ್ ಕಚೇರಿಗೆ ನುಗ್ಗಿ ಅಲ್ಲಿನ ಮ್ಯಾನೇಜರ್ ಮೇಲೂ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ದರೋಡೆಕೋರರ ಬೆನ್ನತ್ತಿದ ಬೀದರ್ ಪೊಲೀಸರು!

ಇನ್ನು ಬೀದರ್ ಪೊಲೀಸರು ಕಳ್ಳರ ಗುಂಪನ್ನು ಬಂಧಿಸಲು ಹೈದರಾಬಾದ್‌ಗೆ ಬಂದಿದ್ದು, ಪೊಲೀಸರನ್ನು ಕಂಡ ಕಳ್ಳರ ಗುಂಪೊಂದು ತಪ್ಪಿಸಿಕೊಳ್ಳಲು ಅಫ್ಜಲ್‌ಗಂಜ್‌ನಲ್ಲಿರುವ ಟ್ರಾವೆಲ್ಸ್ ಕಚೇರಿಗೆ ನುಗ್ಗಿದೆ. ಈ ವೇಳೆ ಪೊಲೀಸರು ಮತ್ತು ದರೋಡೆಕೋರರ ನಡುವೆ ಗುಂಡಿನ ಕಾಳಗ ನಡೆದಿದ್ದು, ಟ್ರಾವೆಲ್ಸ್ ಕಚೇರಿಯಲ್ಲಿದ್ದ ಮ್ಯಾನೇಜರ್ ಗೆ ಗುಂಡು ತಗುಲಿದೆ ಎಂದು ತಿಳಿದುಬಂದಿದೆ. ಬಳಿಕ ದರೋಡೆಕೋರರು ಅಲ್ಲಿಂದ ಪರಾರಿಯಾಗಿದ್ದು, ತೀವ್ರ ರಕ್ತಸ್ರಾವವಾಗಿ ಬಿದ್ದಿದ್ದ ಮ್ಯಾನೇದರ್ ನನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದುಬಂದಿದೆ.

ಬೀದರ್ ಪೊಲೀಸರಿಗೆ ಹೈದರಾಬಾದ್ ಪೊಲೀಸರ ಸಾಥ್..!

ಇನ್ನು ವಿಚಾರ ತಿಳಿಯುತ್ತಲೇ ಘಟನಾ ಸ್ಥಳಕ್ಕೆ ದೌಡಾಯಿಸಿದ ಹೈದರಾಬಾದ್ ಪೊಲೀಸರು ಬೀದರ್ ಪೊಲೀಸರೊಂದಿಗೆ ಸೇರಿ ದರೋಡೆಕೋರರ ವಿರುದ್ಧ ಜಂಟಿ ಕಾರ್ಯಾಚರಣೆ ನಡೆಸಿದ್ದಾರೆ. ಸುತ್ತಮುತ್ತಲ ಪ್ರದೇಶಗಳಲ್ಲಿ ನಾಕಾಬಂದಿ ಘೋಷಿಸಲಾಗಿದ್ದು, ಬೀದರ್ ಪೊಲೀಸರೊಂದಿಗೆ ಸೇರಿ ಕಳ್ಳರ ಗ್ಯಾಂಗ್ ಅನ್ನು ಹಿಡಿಯಲು ಪ್ರಯತ್ನಿಸುತ್ತಿದ್ದಾರೆ.

ಮಾಹಿತಿ ತಿಳಿದ ತಕ್ಷಣ ಪೂರ್ವ ವಲಯ ಡಿಸಿಪಿ ಸ್ಥಳಕ್ಕಾಗಮಿಸಿ ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.

Edited By : Abhishek Kamoji
PublicNext

PublicNext

16/01/2025 10:57 pm

Cinque Terre

26.89 K

Cinque Terre

0

ಸಂಬಂಧಿತ ಸುದ್ದಿ