ನವದೆಹಲಿ: ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರ ಅಸ್ಥಿ ವಿಸರ್ಜನೆ ಸಮಯದಲ್ಲಿ ಕಾಂಗ್ರೆಸ್ ಪಕ್ಷ ಯಾರೋಬ್ಬರರು ಹಾಜರಾಗದೇ ಇದ್ದುದನ್ನು ಉಲ್ಲೇಖಿಸಿದ ಬಿಜೆಪಿ, ಗಾಂಧಿ ಪರಿವಾರವನ್ನು ತರಾಟೆಗೆ ತೆಗೆದುಕೊಂಡಿದೆ.
ಮನಮೋಹನ್ ಸಿಂಗ್ ನಿಧನ ಹಿನ್ನೆಲೆ ಇಡೀ ದೇಶವೇ 7 ದಿನಗಳ ಶೋಕಾಚರಣೆ ನಡೆಸುವಾಗ ರಾಹುಲ್ ಗಾಂಧಿ ಮಾತ್ರ ಹೊಸ ವರ್ಷದ ಆಚರಣೆಗಾಗಿ ವಿಯೆಟ್ನಾಂ ಪ್ರವಾಸ ಕೈಗೊಂಡಿದ್ದಾರೆ. ಈ ಮೂಲಕ ಸಿಂಗ್‌ಗೆ ರಾಹುಲ್ ಗಾಂಧಿ ಮತ್ತೆ ಮತ್ತೆ ಅಪಮಾನ ಮಾಡ್ತಿದ್ದಾರೆ ಎಂದು ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಟ್ವೀಟ್ ಮಾಡಿ ಕಿಡಿಕಾರಿದ್ದಾರೆ.
ಈ ನಡುವೆ ಉರಿಯುವ ಬೆಂಕಿಗೆ ತುಪ್ಪ ಸುರಿದಂತೆ ಮಾತನಾಡಿರುವ ಬಿಜೆಪಿ ವಕ್ತಾರ ಬಿಜೆಪಿಯ ಶೆಹ್‌ಜಾದ್ ಪೂನಾವಾಲಾ, ರಾಹುಲ್ ವಿಪಕ್ಷ ನಾಯಕರಲ್ಲ.. ಬದಲಾಗಿ ಪ್ರವಾಸಿ ನಾಯಕ. ಅವರು ತಮ್ಮ ನಿರೀಕ್ಷೆಯಂತೆ ಪ್ರವಾಸಕ್ಕೆ ತೆರಳಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ ಮುಂಬೈ ಮೇಲಿನ ದಾಳಿಗಳು ನಿಮಗೆ ನೆನಪಿದೆಯೇ? ಎಂದು ಪ್ರಶ್ನಿಸಿರುವ ಅವರು 2008ರಲ್ಲಿ ಮುಂಬೈನಲ್ಲಿ ಭಯೋತ್ಪಾದಕ ದಾಳಿ ನಡೆದಿತ್ತು. ಆಗ ರಾಹುಲ್ ಗಾಂಧಿ ಇಡೀ ರಾತ್ರಿ ತಮ್ಮ ಸ್ನೇಹಿತ ಸಮೀರ್ ಶರ್ಮಾ ಅವರ ಮದುವೆಯಲ್ಲಿ ಪಾಲ್ಗೊಂಡಿದ್ದರು. ದೆಹಲಿ ಹೊರವಲಯದಲ್ಲಿ ಇಡೀ ರಾತ್ರಿ ಪಾರ್ಟಿ ಮಾಡಿದ್ದರು. ಅನೇಕ ವರದಿಗಳು ಈ ಸತ್ಯವನ್ನು ಉಲ್ಲೇಖಿಸಿವೆ ಎಂದು ಕುಟುಕಿದ್ದಾರೆ.
ಬಿಜೆಪಿ ನಾಯಕರ ಹೇಳಿಕೆಗೆ ಕಾಂಗ್ರೆಸ್ ಕೆರಳಿ ಕೆಂಡವಾಗಿದೆ. ಬಿಜೆಪಿ ಆರೋಪಕ್ಕೆ ಕಾಂಗ್ರೆಸ್ ಸಂಸದ ಬಿ ಮಾಣಿಕಂ ಟ್ಯಾಗೋರ್ ಸ್ಪಷ್ಟನೆ ನೀಡಿದ್ದಾರೆ. ವಿಯೆಟ್ನಾಂ ಪ್ರವಾಸ ರಾಹುಲ್ ಗಾಂಧಿ ಅವರ ವೈಯಕ್ತಿಕ ಭೇಟಿ, ಅದರಿಂದ ನಿಮಗೇನು ತೊಂದರೆ? ಹೊಸವರ್ಷದಲ್ಲಾದರೂ ಆರಾಮಾಗಿರಿ ಎಂದು ತಿರುಗೇಟು ನೀಡಿದ್ದಾರೆ.
ಅಲ್ಲದೇ ಸಿಂಗ್ ಕುಟುಂಬ ಅಸ್ಥಿ ವಿಸರ್ಜನೆ ಕಾರ್ಯದ ವೇಳೆ ಖಾಸಗಿತನ ಬಯಸಿತ್ತು ಎಂದು ಸ್ಪಷ್ಟನೆ ನೀಡಿದೆ. ಬಿಜೆಪಿ ನಾಯಕರು ತಮ್ಮ ತಪ್ಪುಗಳನ್ನು, ಹುಳುಕುಗಳನ್ನು ಮುಚ್ಚಿಕೊಳ್ಳಲು ರಾಹುಲ್ ಗಾಂಧಿಯನ್ನು ಟಾರ್ಗೆಟ್ ಮಾಡ್ತಿದ್ದಾರೆ ಎಂದು ಕಿಡಿಕಾರಿದೆ.
PublicNext
31/12/2024 11:11 am