ಹೈದರಾಬಾದ್: ಪುಷ್ಪ 2 ಸಿನಿಮಾ ರಿಲೀಸ್ ಆಗಿದೆ. ಚಿತ್ರಕ್ಕೆ ಹಲವು ವಿಘ್ನಗಳು ಎದುರಾಗುತ್ತಿದ್ದು, ಬೆಂಗಳೂರು ಸೇರಿದಂತೆ ಹಲವು ಚಿತ್ರಮಂದಿರಗಳ ಬೆಳಗ್ಗಿನ ಶೋ ರದ್ದುಪಡಿಸಲಾಗಿದೆ. ಇದರ ನಡುವೆ, ಹೈದರಾಬಾದ್‌ನಲ್ಲಿ ಭಾರಿ ಅವಘಡವೊಂದು ಸಂಭವಿಸಿದೆ.
ಚಿತ್ರ ಪ್ರದರ್ಶನಗೊಳ್ಳುತ್ತಿದ್ದ ಚಿಕ್ಕಡ್‌ಪಲ್ಲಿಯ ಥಿಯೇಟರ್‌ನಲ್ಲಿ ಬುಧವಾರ ತಡರಾತ್ರಿ ಕಾಲ್ತುಳಿತ ಸಂಭವಿಸಿದೆ. ಘಟನೆಯಲ್ಲಿ ಮಹಿಳೆಯೊಬ್ಬರು ಸಾವನ್ನಪ್ಪಿದ್ದು, 12 ವರ್ಷದ ಮಗನ ಮಗನ ಸ್ಥಿತಿ ಚಿಂತಾಜನಕವಾಗಿದೆ.
ಪ್ರೀಮಿಯರ್ ಶೋ ನೋಡಲು ಹೈದರಾಬಾದ್‌ನ ಕುಟುಂಬ ಚಿತ್ರಮಂದಿರಕ್ಕೆ ಭೇಟಿ ನೀಡಿತ್ತು. ಮೃತ ಮಹಿಳೆಯನ್ನು 39 ವರ್ಷದ ರೇವತಿ ಎಂದು ಗುರುತಿಸಲಾಗಿದೆ. ಅವರ ಒಂಬತ್ತು ವರ್ಷದ ಮಗ ಶ್ರೀ ತೇಜಾನನ್ನು ಆಂಬ್ಯುಲೆನ್ಸ್‌ನಲ್ಲಿ ಹತ್ತಿರದ ಆಸ್ಪತ್ರೆಗೆ ಕಳುಹಿಸಲಾಗಿದೆ. ಆದರೆ, ತೇಜಾ ಸ್ಥಿತಿ ಗಂಭೀರವಾಗಿದ್ದ ಹಿನ್ನೆಲೆಯಲ್ಲಿ ತಡರಾತ್ರಿಯೇ ಅಲ್ಲಿಂದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ರವಾನಿಸಲಾಗಿದೆ.
ಸಿನಿಮಾ ವೀಕ್ಷಿಸಲು ಕೆಲ ಸ್ಟಾರ್‌ಗಳು ಥಿಯೇಟರ್‌ಗೆ ಆಗಮಿಸಿದ್ದರು. ಈ ವೇಳೆ ಸಿನಿಮಾ ನೋಡಿ ಚಿತ್ರಮಂದಿರದಿಂದ ಜನರು ಹೊರಬರುತ್ತಿದ್ದಾಗ ತಳ್ಳಾಟ ನಡೆದಿದೆ. ಸೆಲೆಬ್ರಿಟಿಗಳನ್ನು ಭೇಟಿಯಾಗುವ ಸಲುವಾಗಿ ಅಭಿಮಾನಿಗಳು ಒಳಗೆ ನುಗ್ಗಿದ್ದಾರೆ. ಆಗ ರೇವತಿ ಕೆಳಕ್ಕೆ ಬಿದ್ದಿದ್ದಾರೆ ಎಂಬ ಮಾಹಿತಿ ಲಭಿಸಿದೆ.
ಥಿಯೇಟರ್‌ಗೆ ಹೋಗುವ ರಸ್ತೆಗಳು ಮಧ್ಯರಾತ್ರಿಯವರೆಗೂ ಸಾವಿರ ಅಭಿಮಾನಿಗಳಿಂದ ಗಿಜಿಗುಡುತ್ತಿದ್ದವು. ಹೀಗಾಗಿ ಜನರನ್ನು ನಿಯಂತ್ರಿಸಲು ಪೊಲೀಸರು ಲಾಠಿಚಾರ್ಜ್ ಮಾಡಿದ್ದಾರೆ. ಇದರಿಂದಾಗಿ ಸಂಚಾರ ದಟ್ಟಣೆ ಕೂಡಾ ಉಂಟಾಗಿದೆ. ಕಾಲ್ತುಳಿತ ಸಂಭವಿಸಿದಾಗ ಅಲ್ಲು ಅರ್ಜುನ್ ಥಿಯೇಟರ್ ಒಳಗೆ ಚಿತ್ರ ವೀಕ್ಷಿಸುತ್ತಿದ್ದರು ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಹೇಳಿದೆ.
PublicNext
05/12/2024 10:47 am