ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ನಾಗಾರಾಧನಾ ಕ್ಷೇತ್ರ ಕಡಬ ತಾಲೂಕಿನ ಕುಕ್ಕೆ ಶ್ರೀಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಚಂಪಾಷಷ್ಠಿ ಜಾತ್ರಾ ಮಹೋತ್ಸವ ನವೆಂಬರ್ 27ರಿಂದ ಡಿಸೆಂಬರ್12ರವರೆಗೆ ನೆರವೇರಲಿದೆ. ಚಂಪಾಷಷ್ಠಿ ಜಾತ್ರೋತ್ಸವದ ಹಿನ್ನೆಲೆಯಲ್ಲಿ ಕ್ಷೇತ್ರದ ಪ್ರಧಾನ ಸೇವೆಗಳಲ್ಲಿ ಒಂದಾಗಿರುವ ಸರ್ಪ ಸಂಸ್ಕಾರ ಸೇವೆಯು ನವೆಂಬರ್ 25ರಿಂದ ಡಿಸೆಂಬರ್12ರವರೆಗೆ ನೆರವೇರುವುದಿಲ್ಲ. ಇತರ ಸೇವೆಗಳು ಎಂದಿನಂತೆ ನೆರವೇರುತ್ತದೆ. ಲಕ್ಷದೀಪೋತ್ಸವ, ಚೌತಿ, ಪಂಚಮಿ ಮತ್ತು ಷಷ್ಠಿ ದಿನ ಕೆಲವು ಸೇವೆಗಳು ನೆರವೇರುವುದಿಲ್ಲ ಎಂದು ಶ್ರೀಕ್ಷೇತ್ರ ಕುಕ್ಕೆಯ ಪ್ರಕಟನೆ ತಿಳಿಸಿದೆ.
ಲಕ್ಷದೀಪೋತ್ಸವ (ನವೆಂಬರ್ 30), ಚೌತಿ (ಡಿಸೆಂಬರ್ 5), ಪಂಚಮಿ (ಡಿಸೆಂಬರ್ 6) ದಿನದಂದು ರಾತ್ರಿ ಹೊತ್ತಿನಲ್ಲಿ ಪ್ರಾರ್ಥನೆ ಸೇವೆ ಇರುವುದಿಲ್ಲ. ಚಂಪಾಷಷ್ಠಿ (ಡಿ.7) ಯಂದು ಮಧ್ಯಾಹ್ನದ ವೇಳೆ ಪ್ರಾರ್ಥನೆ ಸೇವೆ ನಡೆಯುವುದಿಲ್ಲ. ಚಂಪಾಷಷ್ಠಿ ದಿನ ಆಶ್ಲೇಷಾ ಬಲಿ ಮತ್ತು ನಾಗಪ್ರತಿಷ್ಠೆ ಸೇವೆಗಳು ಇರುವುದಿಲ್ಲ. ನವೆಂಬರ್ 30, ಡಿಸೆಂಬರ್ 5, 6, 7 ಮತ್ತು 12ರಂದು ಪಂಚಾಮೃತ ಮಹಾಭಿಷೇಕ ಸೇವೆ ನಡೆಯುವುದಿಲ್ಲ. ನವೆಂಬರ್ 27ರಿಂದ ಡಿಸೆಂಬರ್ 12ರ ತನಕ ಸಾಯಂಕಾಲದ ಆಶ್ಲೇಷಾ ಬಲಿ ಸೇವೆ ನೆರವೇರುವುದಿಲ್ಲ.
ನವೆಂಬರ್ 26ರಂದು ಮಧ್ಯಾಹ್ನದವರೆಗೆ ದೇವರ ದರ್ಶನ ಇಲ್ಲ
ವಾರ್ಷಿಕ ಚಂಪಾಷಷ್ಠಿ ಜಾತ್ರಾ ಮಹೋತ್ಸವದ ನಿಮಿತ್ತ ನವೆಂಬರ್ 26ರಂದು ಮೂಲಮೃತ್ತಿಕಾ ಪ್ರಸಾದ ತೆಗೆಯುವ ಪವಿತ್ರ ಕಾರ್ಯ ನಡೆಯಲಿದೆ. ಆದ್ದರಿಂದ ಭಕ್ತಾದಿಗಳಿಗೆ ಬೆಳಗ್ಗಿನಿಂದ ಮಧ್ಯಾಹ್ನ 2ರವರೆಗೆ ಶ್ರೀ ದೇವರ ದರ್ಶನ ಹಾಗೂ ಸೇವೆಗಳನ್ನು ನೆರವೇರಿಸಲು ಅವಕಾಶವಿಲ್ಲ. 2 ಗಂಟೆಯ ಬಳಿಕ ಶ್ರೀ ದೇವರ ದರ್ಶನಕ್ಕೆ ಹಾಗೂ ಆಯ್ದ ಸೇವೆಗಳನ್ನು ನೆರವೇರಿಸಲು ಅವಕಾಶವಿದೆ ಎಂದು ದೇವಸ್ಥಾನದ ಪ್ರಕಟನೆ ತಿಳಿಸಿದೆ.
Kshetra Samachara
24/11/2024 12:29 pm