ಚಿಕ್ಕಮಗಳೂರು: ವಿವಾಹ ಸಮಾರಂಭದಲ್ಲಿ ವಧುವಿಗೆ ವರನ ಕಡೆಯವರು ನೀಡಿದ್ದ ಚಿನ್ನವನ್ನು ಖದೀಮರು ಎಗರಿಸಿರುವ ಘಟನೆ ಆಲ್ದೂರು ಠಾಣಾ ವ್ಯಾಪ್ತಿಯ ಹಾಂದಿ ಗ್ರಾಮದ ದಿ ರಾಯಲ್ ಶಾಲಿಮಾರ್ ಹಾಲ್ ನಲ್ಲಿ ನಡೆದಿದೆ.
ಮೂಡಿಗೆರೆ ತಾಲ್ಲೂಕಿನ ಬಂಕೇನಹಳ್ಳಿ ಗ್ರಾಮದ ವಧು ಮತ್ತು ಹ್ಯಾರಗುಡ್ಡೆ ಗ್ರಾಮದ ವರನ ವಿವಾಹ ಕಾರ್ಯಕ್ರಮ ಏರ್ಪಾಡಾಗಿತ್ತು. ಮದುವೆ ವೇಳೆ ವರನ ಕಡೆಯವರು ನೀಡಿದ್ದ ಚಿನ್ನದಲ್ಲಿ ನೆಕ್ಲೆಸ್ ಮತ್ತು ಓಲೆಗಳನ್ನು ವಧುವಿನ ಕೊಠಡಿಯಲ್ಲಿ ಇರಿಸಿ ರೂಮನ್ನು ಲಾಕ್ ಮಾಡಿ ಎಲ್ಲರೂ ಮುಹೂರ್ತ ಕಾರ್ಯದಲ್ಲಿ ನಿರತರಾಗಿದ್ದರು. ಈ ಸಮಯದಲ್ಲಿ ವಧುವಿನ ಕೊಠಡಿಯ ಸ್ಲೈಡಿಂಗ್ ಗ್ಲಾಸ್ ಕಿಟಕಿ ಯಿಂದ ಒಳಬಂದಿರುವ ಕಳ್ಳರು ರೂಮನ್ನು ಒಳಗಿನಿಂದ ಲಾಕ್ ಮಾಡಿಕೊಂಡು ಚಿನ್ನವನ್ನು ಎಗರಿಸಿ ಕಿಟಕಿಯಿಂದಲೇ ಪರಾರಿಯಾಗಿದ್ದಾರೆ. ಅಂದಾಜು ಮೂರು ಲಕ್ಷ ಮೌಲ್ಯದ ಚಿನ್ನ ಕಳ್ಳತನವಾಗಿದೆ ಎಂದು ತಿಳಿದುಬಂದಿದೆ.
ಮುಹೂರ್ತದ ವೇಳೆ ವಧುವಿನ ಕಡೆಯವರು ಕೊಠಡಿಗೆ ಹೋಗಲು ಮುಂದಾದಾಗ ಕೊಠಡಿ ಒಳಗಿನಿಂದ ಲಾಕ್ ಆಗಿತ್ತು. ಇದರಿಂದ ವಿವಾಹ ಸಂದರ್ಭದಲ್ಲಿ ತೀವ್ರ ಗೊಂದಲ ಉಂಟಾಗಿದೆ. ತಕ್ಷಣ ಕಟ್ಟಡ ಮಾಲೀಕರಿಗೆ ವಿಷಯ ಮುಟ್ಟಿಸಿದ್ದು, ಮಾಲೀಕರು ಮತ್ತು ವ್ಯವಸ್ಥಾಪಕರು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದಾಗ ಕಳ್ಳರು ಕಿಟಕಿ ಮೂಲಕ ಒಳಬಂದಿರುವುದು ಬೆಳಕಿಗೆ ಬಂದಿದೆ. ಆಲ್ದೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಶ್ವಾನದಳ ಮತ್ತು ಬೆರಳಚ್ಚು ತಂಡವನ್ನು ಕರೆಸಿ ಪರಿಶೀಲನೆ ನಡೆಸಲಾಗಿದೆ ಕಟ್ಟಡದಲ್ಲಿ ಸುಮಾರು 16 ಸಿಸಿ ಕ್ಯಾಮೆರಾಗಳ ದೃಶ್ಯಗಳನ್ನು ಪರಿಶೀಲನೆ ನಡೆಸಲಾಗಿದೆ.
Kshetra Samachara
14/11/2024 12:10 pm