ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ರಾಜ್ಯಾದ್ಯಂತ ಆಸ್ತಿ ಸೇರಿದಂತೆ ಎಲ್ಲ ನೋಂದಣಿ ಹಠಾತ್ ಸ್ಥಗಿತ!

ಬೆಂಗಳೂರು: ರಾಜ್ಯದಲ್ಲಿ ಇ-ಖಾತಾ ಗೊಂದಲ ಬಗೆ ಹರಿಯುವ ಮೊದಲೇ ಆಸ್ತಿ ನೋಂದಣಿಗೆ ಕಾಯುತ್ತಿದ್ದ ಸಾರ್ವಜನಿಕರಿಗೆ ಮತ್ತೊಂದು ಶಾಕ್ ಎದುರಾಗಿದೆ. ಏಕಾಏಕಿ ಸೋಮವಾರ ಬೆಳಗ್ಗೆಯಿಂದಲೇ ರಾಜ್ಯಾದ್ಯಂತ ಉಪನೋಂದಣಾಧಿಕಾರಿ ಕಚೇರಿಗಳಲ್ಲಿ ಆಸ್ತಿ ಸೇರಿದಂತೆ ಎಲ್ಲ ರೀತಿಯ ದಸ್ತಾವೇಜುಗಳ ನೋಂದಣಿ ಸ್ಥಗಿತಗೊಳಿಸಲಾಗಿದೆ. ರಾಜ್ಯದಲ್ಲಿ ಕೇಂದ್ರದ ನೋಂದಣಿ ಕಾಯಿದೆ-1908ಗೆ ತಿದ್ದುಪಡಿ ತರುವ ಕರ್ನಾಟಕ ನೋಂದಣಿ ತಿದ್ದುಪಡಿ ಕಾಯಿದೆ -2023ಕ್ಕೆ ರಾಷ್ಟ್ರಪತಿಗಳು ಅ.8 ರಂದು ಅಂಕಿತ ಹಾಕಿದ್ದು, ರಾಜ್ಯ ಸರ್ಕಾರ ಅ.19 ರಂದು ಅಧಿಕೃತ ರಾಜ್ಯ ಪತ್ರದಲ್ಲಿ ಪ್ರಕಟಿಸಿದೆ.

ಈ ತಿದ್ದುಪಡಿಯಿಂದ, ನಕಲಿ ದಾಖಲೆ ಆಧರಿಸಿ ಆಸ್ತಿ ದಸ್ತಾವೇಜು ನೋಂದಣಿ ಅಥವಾ ನಕಲಿ ದಸ್ತಾವೇಜು ಸೃಷ್ಟಿ ಮಾಡಿದರೆ ಜಿಲ್ಲಾ ನೋಂದಣಾಧಿಕಾರಿಗಳಿಗೆ ರದ್ದುಪಡಿಸಲು ಅಧಿಕಾರ ನೀಡಲಾಗಿದೆ. ಜತೆಗೆ ನಕಲಿ ದಾಖಲೆ ಆಧರಿಸಿ ನೋಂದಣಿ ಮಾಡಿದ ಉಪ ನೋಂದಣಾಧಿಕಾರಿಗಳಿಗೆ 3 ವರ್ಷದವರೆಗೆ ಜೈಲು ಶಿಕ್ಷೆಗೆ ಗುರಿಪಡಿಸಬಹುದು ಎಂದು ಹೇಳಲಾಗಿದೆ. ಹೀಗಾಗಿ ಉಪ ನೋಂದಣಾಧಿಕಾರಿಗಳು ರಾಜ್ಯಾದ್ಯಂತ ಸೋಮವಾರ ಬೆಳಗ್ಗೆಯಿಂದ ದಸ್ತಾವೇಜುಗಳ ಪರಿಶೀಲನೆ ಹಾಗೂ ನೋಂದಣಿಯನ್ನು ಸ್ಥಗಿತಗೊಳಿಸಿದ್ದಾರೆ. ಶನಿವಾರ ಅರ್ಜಿ ಸಲ್ಲಿಸಿರುವ ಪ್ರಕರಣಗಳಲ್ಲಿ ಕೆಲವು ಕಡೆ ಮಾತ್ರ ಸೋಮವಾರ ನೋಂದಣಿಯಾಗಿದೆ. ಸರ್ಕಾರದಿಂದ ಸಷ್ಟತೆ ಬರುವವರೆಗೂ ನೋಂದಣಿ ಮಾಡುವುದಿಲ್ಲ ಎಂದು ಕೆಲವು ಕಚೇರಿಗಳಲ್ಲಿ ನೋಟಿಸ್ ಅಂಟಿಸಲಾಗಿದೆ.

ಏನಿದು 22 ಬಿ, 22 ಸಿ ಹಾಗೂ 22ಡಿ?:

ಕಾಯ್ದೆಗೆ ಸೇರ್ಪಡೆ ಮಾಡಿರುವ 22-ಬಿಪ್ರಕಾರ ಉಪ ನೋಂದಣಾಧಿಕಾರಿಗಳು ಯಾವುದೇ ಸುಳ್ಳು ಅಥವಾ ನಕಲಿ ದಸ್ತಾವೇಜು, ಕೇಂದ್ರ ಅಥವಾ ರಾಜ್ಯ ಅಧಿನಿಯಮದ ಮೂಲಕ ನಿಷೇಧಿಸಲಾಗಿರುವ ವ್ಯವಹಾರಕ್ಕೆ ಸಂಬಂಧಿಸಿದ ದಸ್ತಾವೇಜು, ಸಕ್ಷಮ ಪ್ರಾಧಿಕಾರ ಅಥವಾ ಯಾವುದೇ ಕೋರ್, ನ್ಯಾಯಾಧೀಕರಣ ಜಪ್ತಿ ಮಾಡಿರುವ ಯಾವುದೇ ಸ್ವತ್ತು ಮಾರಾಟ, ದೇಣಿಗೆ, ಗೇಣಿ ಅಥವಾ ಇತರ ರೂಪದ ವರ್ಗಾವಣೆಗೆ ಸಂಬಂಧಿಸಿರುವ ದಸ್ತಾವೇಜು, ರಾಜ್ಯ ಸರ್ಕಾರ ಅಧಿಸೂಚನೆಯ ಮೂಲಕ ನಿರ್ದಿಷ್ಟಪಡಿಸಬಹುದಾದಂತಹ ಯಾವುದೇ ಇತರೆ ದಸ್ತಾವೇಜುಗಳನ್ನು ನೋಂದಣಿ ಮಾಡಬಾರದು ಎಂದು ಸ್ಪಷ್ಟಪಡಿಸಲಾಗಿದೆ.

ನಕಲಿ ನೋಂದಣಿ ರದ್ದು ಅಧಿಕಾರ:

22-ಸಿ ಪ್ರಕಾರ ಜಿಲ್ಲಾ ನೋಂದಣಾಧಿಕಾರಿಗೆ ಸ್ವಯಂ ಪ್ರೇರಣೆಯಿಂದಾಗಲಿ ಅಥವಾ ವ್ಯಕ್ತಿಯಿಂದ ಪಡೆದ ದೂರಿನ ಮೇಲಾಗಲಿ 22-ಬಿ ಪ್ರಕರಣ ವನ್ನು ಉಲ್ಲಂಘಿಸಿ ದಸ್ತಾ ವೇಜು ನೋಂದಣಿ ಮಾಡಲಾಗಿದೆ ಎಂದು ಗೊತ್ತಾದರೆ ನೋಟಿಸ್ ನೀಡಿ ಸ್ಪಷ್ಟ ಉತ್ತರ ಬಾರದಿದ್ದರೆ ನೋಂದಣಿ ರದ್ದುಪಡಿಸುವ ಅಧಿಕಾರ ನೀಡಲಾಗಿದೆ.

ದಾಖಲೆ ಪರೀಕ್ಷೆ ಬಗ್ಗೆ ತೀವ್ರ ಗೊಂದಲ

ಕಾಯ್ದೆ ಜಾರಿ ಮಾಡುವ ಮೊದಲು ಯಾವ್ಯಾವ ದಾಖಲೆ ಪರಿಶೀಲನೆಗೆ ಯಾವ್ಯಾವ ನಿಯ ಮಾವಳಿ ಪಾಲಿಸಬೇಕು ಎಂಬ ಬಗ್ಗೆ ಸರ್ಕಾರ ಸ್ಪಷ್ಟತೆ ನೀಡಿಲ್ಲ. ಏಕಾಏಕಿ ನಮ್ಮನ್ನು ಹೊಣೆ ಮಾಡುವ ಕಾಯ್ದೆ ಜಾರಿಗೊಳಿಸಿದೆ. ತಮಿಳುನಾಡು ಕಾಯಿದೆಯನ್ನು ಯಥಾವತ್ತಾಗಿ ಅಳವಡಿಸಿಕೊಳ್ಳಲಾಗಿದೆ ಎಂದು ಉಪ ನೋಂದಣಾಧಿಕಾರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗೊಂದಲಗಳೇನು?

• ಈವರೆಗೆ ರಾಜ್ಯದಲ್ಲಿ ನೋಂದಾಯಿತ ಜಿಪಿಎ ಹಾಗೂ ನೋಂದಣಿ ಮಾಡಿಸದ ಜಿಪಿಎ (ಆನ್‌ರಿಜಿಸ್ಟರ್ಡ್) ಮೇಲೂ ರಾಜ್ಯದಲ್ಲೂ ಆಸ್ತಿ ನೋಂದಣಿ ಮಾಡಲಾಗು ತ್ತಿತ್ತು. ಇದೀಗ ಜಿಪಿಎ ನೈಜತೆ ಕೂಡ ಉಪ ನೋಂದಣಾಧಿಕಾರಿ ಪರೀಕ್ಷೆ ಮಾಡ ಬೇಕು. ಜಿಪಿಎ ಬರೆದುಕೊಟ್ಟವರು ಬದುಕಿರುವವರೆಗೂ ಮಾತ್ರ ಜಿಪಿಎಗೆ ಬೆಲೆ. ಜಿಪಿಎ ಬರೆದುಕೊಟ್ಟವರು ಬದುಕಿದ್ದಾರೋ ಸತ್ತಿದ್ದಾರೋ ತಿಳಿಯುವುದು ಹೇಗೆ?

• ಕೇಂದ್ರ ಅಧಿನಿಯಮ ಅಥವಾ ರಾಜ್ಯ ಅಧಿನಿಯಮದ ಮೂಲಕ ನಿಷೇಧಿಸಲಾಗಿರುವ ವ್ಯವಹಾರಕ್ಕೆ ಸಂಬಂಧಿಸಿದ ದಸ್ತಾವೇಜುಗಳ ಪರಿಶೀಲನೆ ಹೇಗೆ? ಯಾವ ಮಾನದಂಡ ಅನುಸರಿಸಬೇಕು?

• ಬ್ಯಾಂಕ್, ಸಹಕಾರಿ ಬ್ಯಾಂಕ್, ಐಟಿ, ಇಡಿ ಜಪ್ತಿ ಮಾಡಿಕೊಂಡ ಆಸ್ತಿಗಳನ್ನು ನೋಂದಣಿ ಮಾಡುವಂತಿಲ್ಲ.ಆದರೆ ಯಾವ ಆಸ್ತಿಗಳನ್ನು ಜಪ್ತಿ ಮಾಡಿಕೊಂಡಿದ್ದಾರೆ ಎಂಬ ಬಗ್ಗೆ ಸಂಬಂಧಪಟ್ಟ ಸಂಸ್ಥೆಗಳು ಉಪ ನೋಂದಣಾಧಿಕಾರಿಗಳಿಗೆ ಮಾಹಿತಿ ನೀಡಿರುವುದಿಲ್ಲ. ಉಪ ನೋಂದಣಾಧಿಕಾರಿಗಳಿಗೆ ಗೊತ್ತಾಗುವುದು ಹೇಗೆ?

• ಪಿಟಿಸಿಎಲ್ ಕಾಯಿದೆಯಡಿ ಬರುವ ಆಸ್ತಿ, ಅಕ್ರಮ ಮಂಜೂರಾತಿ ಆಗಿರುವ ಸರ್ಕಾರಿ ಜಾಗ ನೋಂದಣಿ ಮಾಡುವಂತಿಲ್ಲ, ಅಕ್ರಮ ಮಂಜೂರಾತಿ ಎಂಬುದು ಉಪ ನೋಂದಣಾಧಿಕಾರಿ ಕಚೇರಿಗೆ ಹೇಗೆ ತಿಳಿಯುತ್ತದೆ?

ಕೃಪೆ - ಸುವರ್ಣ ನ್ಯೂಸ್

Edited By : Nagaraj Tulugeri
PublicNext

PublicNext

22/10/2024 02:28 pm

Cinque Terre

40.95 K

Cinque Terre

0

ಸಂಬಂಧಿತ ಸುದ್ದಿ