ಹಾವೇರಿ: ಏಲಕ್ಕಿ ನಗರಿ ಹಾವೇರಿಯಲ್ಲಿ ಶರನ್ನವರಾತ್ರಿಯ ಸಂಭ್ರಮ ಮನೆ ಮಾಡಿದೆ. ಹಾವೇರಿಯ ನವದುರ್ಗೆಯರ ದೇವಸ್ಥಾನ ಪುಷ್ಪಾಲಂಕಾರದಲ್ಲಿ ಕಂಗೊಳಿಸುತ್ತಿದೆ. ಈ ದೇವಸ್ಥಾನದ ಒಂದೇ ಗರ್ಭಗುಡಿಯಲ್ಲಿ ಒಂಭತ್ತು ದುರ್ಗೆಯರ ಪ್ರತಿಷ್ಠಾಪನೆಯಾಗಿರುವುದು ವಿಶೇಷ. ನವರಾತ್ರಿಯ ಈ ದಿನಗಳಲ್ಲಿ ಪ್ರತಿನಿತ್ಯ ಒಂದೊಂದು ದುರ್ಗಾ ಮಾತೆಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಗುತ್ತದೆ.
ಮೊದಲ ದಿನ ಶೈಲಪುತ್ರಿ, ಎರಡನೇ ದಿನ ಬ್ರಹ್ಮಚಾರಿಣಿ, ಮೂರನೇ ದಿನ ಚಂದ್ರಘಂಟಾ, ನಾಲ್ಕನೇ ದಿನ ಕೂಷ್ಮಾಂಡಾ, ಐದನೇ ದಿನ ಸ್ಕಂದ ಮಾತಾ, ಆರನೇ ದಿನ ಕಾತ್ಯಾಯಿನಿ, ಏಳನೇ ದಿನ ಕಾಲರಾತ್ರಿ, ಎಂಟನೇ ದಿನ ಮಹಾಗೌರಿಗೆ ಪೂಜೆ ಸಲ್ಲಿಸಿದರೆ ಒಂಭತ್ತನೇ ದಿನ ಸಿದ್ಧಿದಾತ್ರಿಗೆ ಪೂಜೆ ಸಲ್ಲಿಸಲಾಗುತ್ತದೆ.
ಮೊದಲನೇ ದಿನವಾದ ಗುರುವಾರ ಶೈಲಪುತ್ರಿಗೆ ಪೂಜೆ ಸಲ್ಲಿಸಿದರೆ, ಎರಡನೇ ದಿನವಾದ ಶುಕ್ರವಾರ ಬ್ರಹ್ಮಚಾರಿಣಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ದೇವಸ್ಥಾನಕ್ಕೆ ಮೂಲದಲ್ಲಿ ಹಕ್ಕಲ ಮರಿಯಮ್ಮ ದೇವಸ್ಥಾನ ಎಂದು ಕರೆಯಲಾಗುತ್ತಿತ್ತು. ಅಲ್ಲದೆ, ದೇವಸ್ಥಾನದಲ್ಲಿ 38 ದೇವರ ಮೂರ್ತಿಗಳನ್ನು ಪ್ರತಿಷ್ಠಾಪಿಸಲಾಗಿದೆ. ಇದಕ್ಕೆ ದೇವಿ ಪಂಚಾಯತನ ಎಂದು ಕರೆಯಲಾಗುತ್ತಿದ್ದು, ಪ್ರತಿನಿತ್ಯ ಎಲ್ಲ ಮೂರ್ತಿಗಳಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ.
PublicNext
04/10/2024 10:25 pm