ಕಾರವಾರ (ಉತ್ತರಕನ್ನಡ): ಎರಡು ಅಂತಸ್ತು ಮೇಲೆದ್ದು, ಮೂರನೇ ಮಹಡಿ ಪೂರ್ಣಗೊಳ್ಳುವ ಹಂತದಲ್ಲಿರುವ ಕಾರವಾರದ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ನೂತನ ಆಸ್ಪತ್ರೆ ಕಟ್ಟಡಕ್ಕೆ ಅಕ್ಟೋಬರ್ 11ರಂದು ಶಂಕುಸ್ಥಾಪನೆ ನೆರವೇರಿಸಲು ಸಚಿವರು ಬರಲಿದ್ದಾರೆಂಬ ಸುದ್ದಿ ಕಾರವಾರ ಕ್ಷೇತ್ರದಲ್ಲಿ ಭಾರೀ ಚರ್ಚೆಗೆ ಗ್ರಾಸವಾಗಿದೆ.
ಹೌದು, ಕ್ರಿಮ್ಸ್ ನ ನೂತನ ಆಸ್ಪತ್ರೆಗೆ ಶಂಕುಸ್ಥಾಪನೆ ನೆರವೇರಿಸಲು ಆರೋಗ್ಯ ಸಚಿವ ಡಾ.ಸುಧಾಕರ್ ಬರುತ್ತಿರುವುದಾಗಿ ಕಾರವಾರ ಶಾಸಕಿ ರೂಪಾಲಿ ನಾಯ್ಕ ಪ್ರಕಟಣೆ ಹೊರಡಿಸಿದ್ದಾರೆ. ಈಗಾಗಲೇ ಎರಡ್ಮೂರು ಅಂತಸ್ತು ಮೇಲೆದ್ದಿರುವ ಕಟ್ಟಡಕ್ಕೆ ಈಗ ಭೂಮಿಪೂಜೆ ಮಾಡಲು ಸಚಿವರು ಬರುತ್ತಿರುವುದು ಅಪಹಾಸ್ಯಕ್ಕೆ ಗುರಿಯಾಗಿದ್ದು, ಈ ಬಗ್ಗೆ ಸಾಕಷ್ಟು ಟೀಕೆಗಳು ಕೂಡ ವ್ಯಕ್ತವಾಗಿದೆ.
ಇನ್ನು, ನೂತನ ಆಸ್ಪತ್ರೆಯ ಕಟ್ಟಡ ಎರಡ್ಮೂರು ಅಂತಸ್ತು ಮೇಲೆದ್ದಿರುವುದು ಮಾತ್ರವಲ್ಲ, ಈ ಕಟ್ಟಡ ಕಾಮಗಾರಿಯ ಗುತ್ತಿಗೆ ಪಡೆದಿರುವ ಬಿಎಸ್ಆರ್ ಇನ್ಫ್ರಾಟೆಕ್ ಕಂಪನಿ ಈ ತಿಂಗಳ 20ಕ್ಕೆ ಆಸ್ಪತ್ರೆಯ ಕಟ್ಟಡ ಕಾಮಗಾರಿ ಪೂರ್ಣಗೊಳ್ಳಲಿದೆ ಎಂದು ಕಾಮಗಾರಿ ಸ್ಥಳದಲ್ಲಿ ಅಳವಡಿಸಿರುವ ಬೋರ್ಡ್ ನಲ್ಲಿ ಉಲ್ಲೇಖಿಸಿದೆ. ಆದರೆ, ಈ ಅವಧಿ ಮುಗಿಯಲು ಕೇವಲ 10 ದಿನಗಳಿರುವಾಗ ಆರೋಗ್ಯ ಸಚಿವರು ಬಂದು ಶಂಕುಸ್ಥಾಪನೆ ಮಾಡಲಿದ್ದಾರೆಂಬ ಶಾಸಕಿಯ ಹೇಳಿಕೆ ಇದೀಗ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದ್ದು, ಪರೇಶ್ ಮೇಸ್ತಾನ ಸಾವಿನ ಬಳಿಕ ಇದೀಗ ಆಸ್ಪತ್ರೆ ವಿಚಾರವನ್ನು ರಾಜಕೀಯವಾಗಿ ಬಳಸಿಕೊಳ್ಳಲು ಬಿಜೆಪಿಗರು ಮುಂದಾಗಿದ್ದಾರೆಂಬ ಟೀಕೆ ವ್ಯಕ್ತವಾಗಿದೆ.
ಒಟ್ಟಿನಲ್ಲಿ, ಉತ್ತರಕನ್ನಡ ಜಿಲ್ಲೆಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗಾಗಿ ಹೋರಾಟಗಳು ತೀವ್ರಗೊಂಡಾಗ ಜಿಲ್ಲೆಗೆ ಭೇಟಿ ನೀಡದ ಆರೋಗ್ಯ ಸಚಿವ ಡಾ.ಸುಧಾಕರ್, ಈಗ ಪೂರ್ಣಗೊಳ್ಳುವ ಹಂತಕ್ಕೆ ಬಂದಿರುವ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲು ಕಾರವಾರಕ್ಕೆ ಬರುತ್ತಿರುವುದು ನಿಜಕ್ಕೂ ಅಚ್ಚರಿಗೆ ಕಾರಣವಾಗಿದ್ದು, ಈ ವಿಚಾರ ಮುಂದೆ ಯಾವ ರೀತಿ ತಿರುವು ಪಡೆಯಲಿದೆ ಎಂಬುದನ್ನು ಕಾದು ನೋಡಬೇಕಿದೆ.
PublicNext
07/10/2022 04:54 pm