ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರವಾರ : ಬೀಚ್‌ ಸ್ವಚ್ಛತೆ, ಕ್ರೀಡಾ ಕಲರವ; ಕರಾವಳಿ ಕಾವಲು ಪಡೆ, ಮೀನುಗಾರರು ಭಾಗಿ, ರೋಚಕ ದೋಣಿ ಸ್ಪರ್ಧೆ

ಕಾರವಾರ (ಉತ್ತರ ಕನ್ನಡ): ಕರಾವಳಿ ಕಾವಲು ಪಡೆ ಪೊಲೀಸರು ಹಾಗೂ ಸ್ಥಳೀಯ ಮೀನುಗಾರರು ಮತ್ತು ಅವರ ಕುಟುಂಬಸ್ಥರು ಅಂಕೋಲಾ ತಾಲೂಕಿನ ಹಾರವಾಡದ ಕಡಲತೀರದಲ್ಲಿ ಸ್ವಚ್ಛತೆ ನಡೆಸಿದರು.

ಕಡಲತೀರದುದ್ದಕ್ಕೂ ಬಿದ್ದಿದ್ದ ಪ್ಲಾಸ್ಟಿಕ್, ಬಟ್ಟೆ, ಬಾಟಲ್, ಬಲೆ ಸೇರಿದಂತೆ ತರಗೆಲೆಯ ತ್ಯಾಜ್ಯವನ್ನ ಒಟ್ಟುಗೂಡಿಸಿ ಬೀಚ್ ಸ್ವಚ್ಛಗೊಳಿಸಲಾಯಿತು. ಬಳಿಕ ಸ್ಥಳೀಯರಿಗೆ ಇದೇ ಮೊದಲ ಬಾರಿಗೆ ಕಡಲತೀರದಲ್ಲಿಯೇ ಹುಟ್ಟುದೋಣಿ ಸ್ಪರ್ಧೆ ಆಯೋಜಿಸಲಾಗಿತ್ತು. ಒಟ್ಟು 12 ದೋಣಿಗಳಲ್ಲಿ ತಲಾ ಇಬ್ಬರಂತೆ ಮೀನುಗಾರರು ಭಾಗವಹಿಸಿದ್ದು,‌ ನಿತ್ಯ ಕಸುಬಿನಲ್ಲಿ ನಿಧಾನವಾಗಿ ದೋಣಿ ಓಡಿಸುತ್ತಿದ್ದವರು ಈ ಬಾರಿ ಸ್ಪರ್ಧೆಗಾಗಿ ಇರುವ ಶಕ್ತಿಯನ್ನೆಲ್ಲ ಬಳಸಿ ದೋಣಿ ಓಡಿಸಿ ಎಲ್ಲರ ಗಮನ ಸೆಳೆದರು.

ಇನ್ನು, ದೋಣಿ ಸ್ಪರ್ಧೆ ಮಾತ್ರವಲ್ಲದೇ ಗುಂಡು ಎಸೆತ, ಹೆಣ್ಣು ಮಕ್ಕಳಿಗೆ ಮ್ಯೂಸಿಕಲ್ ಚೇರ್, ಹಗ್ಗ ಜಗ್ಗಾಟ ಸ್ಪರ್ಧೆ ನಡೆದವು. ಹಗ್ಗ ಜಗ್ಗಾಟದಲ್ಲಿ‌ ಸ್ಥಳೀಯ ಮೀನುಗಾರರೇ ನಾಲ್ಕು ತಂಡ ಮಾಡಿಕೊಂಡು ಬಲ ಪ್ರದರ್ಶನ ನಡೆಸಿದ್ದು, ರೋಚಕವಾಗಿದ್ದ ಸ್ಪರ್ಧೆಯನ್ನ ನೋಡುವುದಕ್ಕೆ ವಿದ್ಯಾರ್ಥಿಗಳು, ಸ್ಥಳೀಯರು ನೆರೆದಿದ್ದರು. ಇನ್ನು ಮುಂದೆಯೂ ಇಂತಹ ಕಾರ್ಯಕ್ರಮಗಳನ್ನ ಆಯೋಜನೆ ಮಾಡಬೇಕು ಎನ್ನುತ್ತಾರೆ ಸ್ಥಳೀಯರು.

ಒಟ್ಟಿನಲ್ಲಿ ಅಂತಾರಾಷ್ಟ್ರೀಯ ಕಡಲತೀರ ಸ್ವಚ್ಛತಾ ದಿನದ ಅಂಗವಾಗಿ ಮೀನುಗಾರರ ಸಹಭಾಗಿತ್ವದೊಂದಿಗೆ ಬೀಚ್‌ನಲ್ಲಿ ಬಿದ್ದಿದ್ದ ಕಸ ಸಂಗ್ರಹಿಸುವುದರ ಜೊತೆಗೆ ವಿವಿಧ ಕ್ರೀಡಾಸ್ಪರ್ಧೆಗಳನ್ನ ಆಯೋಜಿಸಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಂತೂ ಸತ್ಯ.

Edited By : Shivu K
Kshetra Samachara

Kshetra Samachara

19/09/2022 08:40 am

Cinque Terre

3.38 K

Cinque Terre

0