ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳದಲ್ಲಿ ಖಟ್ಟರ್ ಹಿಂದೂವಾದಿ ಮುತಾಲಿಕ್ ಸ್ಪರ್ಧೆಗೆ ಹಿಂದೂ ಕಾರ್ಯಕರ್ತರ ಒತ್ತಡ: ಬಿಜೆಪಿ ಭದ್ರಕೋಟೆಯಲ್ಲಿ ಸಂಚಲನ

ಕಾರ್ಕಳ: ಹಿಂದುತ್ವದ ಭದ್ರಕೋಟೆಯಾಗಿರುವ ಕರಾವಳಿಯ ಉಡುಪಿ ಜಿಲ್ಲೆಯಲ್ಲಿ ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್ 5 ದಿನಗಳ ಓಡಾಟ ನಡೆಸಿ ಕಾರ್ಯಕರ್ತರೊಂದಿಗೆ ಸಭೆ ನಡೆಸಿರುವ ವಿಚಾರ ಇದೀಗ ಚರ್ಚೆಗೆ ಗ್ರಾಸವಾಗಿದೆ ಹಾಗೂ ತನ್ನ ಸ್ವಕ್ಷೇತ್ರದಲ್ಲೇ ಪಕ್ಷದ ಕಾರ್ಯಕರ್ತರನ್ನು ಸೇರಿಸಿಕೊಂಡು ಮುತಾಲಿಕ್ ಸಭೆಗಳನ್ನು ನಡೆಸಿರುವುದು ಕಾರ್ಕಳ ಬಿಜೆಪಿ ನಾಯಕರ ಎದೆಯಲ್ಲಿ ನಡುಕ ಶುರುವಾಗಿದೆ.

ಹಿಂದುತ್ವದ ಆಧಾರದಲ್ಲಿ ಅಧಿಕಾರಕ್ಕೆ ಬಂದ ಬಿಜೆಪಿ ಸರಕಾರದಿಂದ ಹಿಂದೂಗಳಿಗೆ ರಕ್ಷಣೆ ನೀಡುತ್ತಿಲ್ಲ ಎನ್ನುವ ಹಿಂದೂ ಸಂಘಟನೆ ಕಾರ್ಯಕರ್ತರ ಆರೋಪದ ನಡುವೆ ಇದೀಗ ಪ್ರಖರ ಹಿಂದೂವಾದಿ ಪ್ರಮೋದ್ ಮುತಾಲಿಕ್ ಚುನಾವಣೆಗೆ ಸ್ಪರ್ಧಿಸಬೇಕೆಂದು ಹಿಂದೂ ಸಂಘಟನೆಯ ಕಾರ್ಯಕರ್ತರು ಒತ್ತಡ ಹೇರಿದ್ದಾರೆ.

ಈ ವಿಚಾರವನ್ನು ಸ್ವತಃ ಮುತಾಲಿಕ್ ಅವರೇ ಮಾಧ್ಯಮಗಳ ಮೂಲಕ ಕಾರ್ಕಳ ಭೇಟಿಯ ವೇಳೆ ಹಂಚಿಕೊAಡಿದ್ದರು. ಆದರೆ ಮುತಾಲಿಕ್ ಪಕ್ಷ ಸ್ಥಾಪಿಸುವ ಯಾವುದೇ ಯೋಚನೆಯಿಲ್ಲವೆಂದಿದ್ದು, ಒಂದುವೇಳೆ ಚುನಾವಣೆಗೆ ಸ್ಪರ್ಧಿಸಲು ಆಸಕ್ತಿ ತೋರಿದರೆ ಬಿಜೆಪಿಯಲ್ಲಿ ಅವಕಾಶ ಇದೆಯೇ ಅಥವಾ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಾರೆಯೇ ಎನ್ನುವ ಗುಟ್ಟನ್ನು ಮುತಾಲಿಕ್ ಬಿಟ್ಟುಕೊಟ್ಟಿಲ್ಲ.

ಉಡುಪಿ ಜಿಲ್ಲೆಯಿಂದ ಸ್ಪರ್ಧಿಸಬೇಕೆಂದು ಕಾರ್ಯಕರ್ತರ ಒತ್ತಡವಿದೆ ಎಂದಿದ್ದ ಅವರು ತನ್ನ 5 ದಿನಗಳ ಭೇಟಿಯಲ್ಲಿ 3 ದಿನ ಕಾರ್ಕಳದಲ್ಲಿ ಓಡಾಟ ನಡೆಸಿ ಅಲ್ಲಲ್ಲಿ ಹಿಂದೂ ಕಾರ್ಯಕರ್ತರ ಸಭೆ ನಡೆಸಿರುವುದು ಕಾರ್ಕಳದ ರಾಜಕೀಯ ವಲಯದಲ್ಲಿ ತೀವೃ ಸಂಚಲನ ಮೂಡಿಸಿದೆ.

ಆದರೆ ಮುತಾಲಿಕ್ ಅವರಿಗೆ ಕಾರ್ಕಳದಲ್ಲಿ ಬಿಜೆಪಿಯಿಂದ ಟಿಕೆಟ್ ಪಡೆಯುವುದು ಅಷ್ಟು ಸುಲಭವಲ್ಲ ಎನ್ನುವ ವಿಚಾರ ಗೊತ್ತಿದ್ದರೂ ಕಾರ್ಯಕರ್ತರ ಒತ್ತಾಯದ ಮೇರೆಗೆ ಕಾರ್ಕಳದಿಂದಲೇ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವ ಸಾಧ್ಯತೆಗಳನ್ನು ತಳ್ಳಿ ಹಾಕುವಂತಿಲ್ಲ ಎಂದು ಮತಾಲಿಕ್ ಅವರ ಮಾತುಗಳಿಂದಲೇ ಸ್ಪಷ್ಟವಾಗಿದೆ.ಒಂದುವೇಳೆ ಮುತಾಲಿಕ್ ಸ್ಪರ್ಧೆ ಖಚಿತವಾದರೆ ಹಾಲಿ ಶಾಸಕ ಸುನಿಲ್‌ಕುಮಾರ್ ಅವರಿಗೆ ಬಿಸಿತುಪ್ಪವಾಗಿ ಪರಿಣಮಿಸಲಿದೆ ಎಂದು ವಿಶ್ಲೇಷಿಸಲಾಗಿದೆ.

ಸುನಿಲ್‌ಕುಮಾರ್ ಕಾರ್ಕಳದಿಂದಲೇ ಸ್ಪರ್ಧೆ ಖಚಿತ?

ಬಿಜೆಪಿ ಪ್ರಬಲ ಯುವಕನಾಯಕ ಹಾಗೂ ಮುಂದಿನ ಸಿಎಂ ಅಭ್ಯರ್ಥಿ ಎಂದೇ ಬಿಂಬಿತವಾಗಿರುವ ಕಾರ್ಕಳ ಶಾಸಕ ಹಾಗೂ ಸಚಿವ ಸುನಿಲ್‌ಕುಮಾರ್ ಕಾರ್ಕಳದಿಂದಲೇ ಕಣಕ್ಕಿಳಿಯಲಿದ್ದಾರೆ ಎನ್ನುವ ಮಾತುಗಳು ಬಿಜೆಪಿ ಪಕ್ಷದ ವಲಯದಲ್ಲಿದ್ದು, ಇನ್ನೊಂದು ಮೂಲದ ಪ್ರಕಾರ ಬೆಂಗಳೂರು ರಾಜಾಜಿನಗರ ಕ್ಷೇತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ ಎನ್ನುವ ಊಹಾಪೋಹ ಎದ್ದಿದೆ. ರಾಜಾಜಿನಗರದ ಹಾಲಿ ಶಾಸಕ ಸುರೇಶ್ ಕುಮಾರ್ ಅವರನ್ನು ಪಕ್ಷ ಸಂಘಟನೆಗೆ ನಿಯೋಜಿಸುತ್ತಾರೆ ಎನ್ನಲಾಗುತ್ತಿದ್ದು, ತೆರವಾದ ರಾಜಾಜಿನಗರ ಕ್ಷೇತ್ರಕ್ಕೆ ಸುನಿಲ್ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎನ್ನುವ ಮಾತುಗಳು ಹರಿದಾಡುತ್ತಿವೆ.

ಆದರೆ ಕಾರ್ಕಳದ ಸಮಗ್ರ ಅಭಿವೃದ್ಧಿಯ ಕನಸನ್ನು ಇಟ್ಟುಕೊಂಡು ಅಭಿವೃದ್ಧಿ ಚಟುವಟಿಕೆಗಳನ್ನು ನಡೆಸುತ್ತಿರುವ ಸುನಿಲ್‌ಕುಮಾರ್ ಅವರು ಕ್ಷೇತ್ರ ಬದಲಾವಣೆ ಮಾಡುವ ಯೋಚನೆಯನ್ನೇ ಮಾಡಿಲ್ಲವೆಂದು ಅವರ ಆಪ್ತರೇ ಹೇಳಿಕೊಂಡಿದ್ದಾರೆ.

ಕಾರ್ಕಳ ಕಾಂಗ್ರೆಸ್‌ನಲ್ಲಿ ಪಕ್ಷ ಸಂಘಟನೆಯ ಹಾಗೂ ಸಮರ್ಥ ನಾಯಕನ ಕೊರತೆ ಬಿಜೆಪಿಗೆ ವರದಾನವಾಗಿದ್ದು, ಬಿಜೆಪಿಯಿಂದ ಯಾರೇ ಸ್ಪರ್ಧಿಸಿದರೂ ಗೆಲುವು ನಿಶ್ಚಿತ ಎನ್ನುವ ವಿಶ್ವಾಸದಲ್ಲಿದೆ ಬಿಜೆಪಿ. ಈ ಹಿನ್ನಲೆಯಲ್ಲಿ ಕಾರ್ಕಳದಲ್ಲಿ ಸ್ಪರ್ಧಿಸಲು ಬಿಜೆಪಿ ಇತರೇ ನಾಯಕರು ಒಲವು ತೋರುತ್ತಿದ್ದಾರೆ ಎನ್ನುವ ಚರ್ಚೆಗಳೂ ಶುರುವಾಗಿದ್ದು, ಈ ಕುರಿತು ಹೈಕಮಾಂಡ್ ಮಟ್ಟದಲ್ಲಿ ತೆರೆಮರೆಯಲ್ಲಿ ಪ್ರಯತ್ನಿಸುತ್ತಿದ್ದಾರೆ ಎನ್ನುವ ವಿಚಾರವೂ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ.

ಆದರೆ ಸಂಘ ಪರಿವಾರವು ಬಿಜೆಪಿಯೊಂದಿಗೆ ಚರ್ಚಿಸಿ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಹಿನ್ನಲೆಯಲ್ಲಿ ಅಂತಿಮ ಅಭ್ಯರ್ಥಿ ಯಾರು ಎನ್ನುವ ಪ್ರಶ್ನೆಗೆ ಇನ್ನಷ್ಟು ತಿಂಗಳು ಕಾದುನೋಡಬೇಕಿದೆ.

Edited By : PublicNext Desk
Kshetra Samachara

Kshetra Samachara

12/10/2022 10:02 pm

Cinque Terre

8.57 K

Cinque Terre

0

ಸಂಬಂಧಿತ ಸುದ್ದಿ