ಉಡುಪಿ ಜಿಲ್ಲೆಯ ಸಿಆರ್‌ಝಡ್ ವ್ಯಾಪ್ತಿಯಲ್ಲಿ ಹಿಂದೆ ನಡೆದ ಮರಳುಗಾರಿಕೆಯಲ್ಲಿ ವ್ಯಾಪಕ ಅಕ್ರಮ ಹಾಗೂ ಭ್ರಷ್ಟಾಚಾರ ನಡೆದಿದೆ ಎಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘಟನೆಗಳ ಒಕ್ಕೂಟ ಗಂಭೀರ ಆರೋಪ ಮಾಡಿದೆ.
ಉಡುಪಿ ಪ್ರೆಸ್ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಟ್ಟಡ ಸಾಮಾಗ್ರಿ ಸಾಗಾಟ ಲಾರಿ ಟೆಂಪೊ ಮಾಲಕರ ಸಂಘದ ಕಟಪಾಡಿ ವಲಯ ಸಮಿತಿಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿ, ಜಿಲ್ಲೆಯ ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಮೂಗಿನಡಿಯಲ್ಲಿ ಈ ಎಲ್ಲಾ ಅಕ್ರಮಗಳು ನಡೆದಿವೆ. ಇದರಲ್ಲಿ ಇಲಾಖೆಯ ಅಧಿಕಾರಿಗಳು ನೇರವಾಗಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿದರು. ಕಳೆದೆರಡು ವರ್ಷಗಳಲ್ಲಿ ಮರಳು ಮಾರಾಟ ಹಾಗೂ ಪರವಾನಿಗೆದಾರರು- ಅಧಿಕಾರಿಗಳು ಸೇರಿ ನಡೆಸಿದ ಜಿಪಿಎಸ್ ಬಳಕೆಯ ಕಣ್ಣುಮುಚ್ಚಾಲೆ ಆಟದಲ್ಲಿ ಜಿಲ್ಲಾಡಳಿತಕ್ಕೆ ಹಾಗೂ ಸರಕಾರಕ್ಕೆ ಕೋಟಿ ಕೋಟಿ ರೂ.ಗಳ ವಂಚನೆಯಾಗಿದೆ. 'ನೀವು ಅಕ್ರಮ ಮಾಡಿ ನಮಗೂ ಅದರಲ್ಲಿ ಪಾಲು ಕೊಡಿ' ಎಂಬುದು ಅದರಲ್ಲಿ ಭಾಗಿಯಾದ ಎಲ್ಲರ ಘೋಷವಾಕ್ಯದಂತಿದೆ ಎಂದು ರಾಘು ಶೆಟ್ಟಿ ತಿಳಿಸಿದರು. ಮರಳು ಧಕ್ಕೆಯಲ್ಲಿ ರೈಟರ್ ಆಗಿದ್ದವರು ಸಹ ಈ ವರ್ಷ ನಾಲೈದು ವಾಹನಗಳನ್ನು ಇಟ್ಟುಕೊಂಡಿದ್ದಾರೆ ಎಂದು ಹೇಳಿದ್ದಾರೆ. ಇದೇ ವೇಳೆ ಕೆಲವು ದಾಖಲೆ ಬಿಡುಗಡೆ ಮಾಡಿದ ಅವರು, ದಾಖಲೆ ಸಮೇತ ಈ ಆರೋಪ ಮಾಡುತ್ತಿರುವುದಾಗಿ ಹೇಳಿದರು.
Kshetra Samachara
26/05/2022 03:09 pm