ಕುಂದಾಪುರ: ಕಿವುಡರ ವಿಶ್ವಕಪ್ ಕ್ರಿಕೆಟ್ ಪಂದ್ಯಾವಳಿಗೆ ಪೂರ್ವಭಾವಿಯಾಗಿ ಯುಎಇನಲ್ಲಿ ಅ.2ರಿಂದ ನಡೆಯಲಿರುವ ಐಸಿಸಿ ಕಿವುಡರ ಚಾಂಪಿಯನ್ಸ್ ಟ್ರೋಫಿ-2020 ಟಿ-20 ಪಂದ್ಯಾಕೂಟಕ್ಕೆ ಭಾರತ ತಂಡದಲ್ಲಿ ಕುಂದಾಪುರ ಮೂಲದ ಪೃಥ್ವಿರಾಜ್ ಶೆಟ್ಟಿ ಸ್ಥಾನ ಪಡೆದುಕೊಂಡಿದ್ದಾರೆ. ಕತರ್ ಅಥವಾ ಆಸ್ಟ್ರೇಲಿಯಾದಲ್ಲಿ ಕಿವುಡರ ಐಸಿಸಿ ವಿಶ್ವಕಪ್ ಪಂದ್ಯಾಟ ನಡೆಯಲಿದೆ. ಅದಕ್ಕೂ ಮುಂಚಿತವಾಗಿ ಅ.1 ರಿಂದ ಅ.9 ರವರೆಗೆ ಚಾಂಪಿಯನ್ಸ್ ಟ್ರೋಫಿ ನಡೆಯುತ್ತಿದೆ. ಅ.2ರಂದು ಭಾರತ ಪಾಕಿಸ್ಥಾನವನ್ನು ಎದುರಿಸಲಿದ್ದು, ಅ.4ಕ್ಕೆ ದ.ಆಫ್ರಿಕಾ, ಅ.5ಕ್ಕೆ ಬಾಂಗ್ಲಾದೇಶ ಹಾಗೂ ಅ.7 ರಂದು ಆಸ್ಟ್ರೇಲಿಯಾವನ್ನು ಎದುರಿಸಲಿದೆ.
ಭಾರತ ತಂಡದಲ್ಲಿ ಬೈಂದೂರು ತಾಲೂಕಿನ ಕೊಲ್ಲೂರು ಸಮೀಪದ ಗೋಳಿ ಹೊಳೆ ಗ್ರಾಮದ ಹುಂಚನಿಯ ದಿ.ಸುಭಾಶ್ಚಂದ್ರ ಶೆಟ್ಟಿ ಹಾಗೂ ಶೀಲಾವತಿ ದಂಪತಿಯ ಪುತ್ರ ಪೃಥ್ವಿರಾಜ್ ಸ್ಥಾನ ಪಡೆದಿದ್ದಾರೆ. ತಂಡದ ಪ್ರಧಾನ ವೇಗದ ಬೌಲರ್ ಆಗಿರುವ 31 ವರ್ಷ ಪ್ರಾಯದ ಪ್ರಥ್ವಿ ಕೆಳ ಕ್ರಮಾಂಕದ ಬ್ಯಾಟರ್ ಆಗಿದ್ದಾರೆ.
ದಿಲ್ಲಿಯಲ್ಲಿ ಒಂದು ತಿಂಗಳ ಕಾಲ ತರಬೇತಿ ಮುಗಿಸಿದ ಭಾರತ ತಂಡವು ಟ್ರೋಫಿ ಗೆಲ್ಲುವ ವಿಶ್ವಾಸದೊಂದಿಗೆ ಯುಎಇಗೆ ಪ್ರಯಾಣ ಬೆಳೆಸಿದೆ. ಈ 15 ಮಂದಿಯ ತಂಡದಲ್ಲಿ ಪೃಥ್ವಿರಾಜ್ ಅವರು ಸ್ಥಾನ ಪಡೆದಿರುವ ಏಕೈಕ ಕನ್ನಡಿಗರಾಗಿದ್ದಾರೆ. ಗೋಳಿಹೊಳೆಯ ಪೃಥ್ವಿರಾಜ್ ಶೆಟ್ಟಿಯವರು ಹುಟ್ಟು ಕಿವುಡರಾಗಿದ್ದರೂ, ಈ ನ್ಯೂನತೆ ಮೆಟ್ಟಿ ನಿಂತು ಕ್ರಿಕೆಟ್ ನಲ್ಲಿ ಸಾಧನೆ ಮಾಡಬೇಕು ಎಂಬ ಕನಸು ಹೊತ್ತಿದ್ದಾರೆ.
Kshetra Samachara
01/10/2022 10:14 am