ಕುಂದಾಪುರ: ಗ್ರಾಮೀಣ ಕ್ರೀಡೆಯಾಗಿರುವ ಕಬಡ್ಡಿ ಇಂದು ವಿಶ್ವಮಟ್ಟದಲ್ಲಿ ಪ್ರಸಿದ್ಧಿ ಪಡೆದಿದೆ ಎಂದು ಕೋಟ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ ಕುಂದರ್ ಹೇಳಿದ್ದಾರೆ.
ಕೋಟ ಪಡುಕರೆ ಸಂಯುಕ್ತ ಪ್ರೌಢಶಾಲೆಯಲ್ಲಿ ಬ್ರಹ್ಮಾವರ ತಾಲೂಕು ಮಟ್ಟದ ಪ್ರೌಢಶಾಲಾ ಬಾಲಕ ಬಾಲಕಿಯರ ವಿಭಾಗದ ಕಬಡ್ಡಿ ಪಂದ್ಯಾಕೂಟವನ್ನು ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಂದು ಕ್ರೀಡೆಯಲ್ಲಿ ಉತ್ಸಾಹ ಅತ್ಯಗತ್ಯ. ಆದರೆ ಅದರಲ್ಲಿ ನಿರಂತವಾಗಿ ಪಳಗಿಕೊಂಡರೆ ಯಶಸ್ಸು ಕಟ್ಟಿಟ್ಟ ಬುತ್ತಿ. ಪ್ರಸ್ತುತ ದಿನಗಳಲ್ಲಿ ಸರಕಾರ ಕ್ರೀಡೆಗೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದೆ. ಇದರ ಲಾಭವನ್ನು ಇಂದಿನ ಯುವ ಸಮೂಹ ಪಡೆದುಕೊಂಡು ಸಾಧನೆಯ ಮೆಟ್ಟಿಲು ಏರಬೇಕಾಗಿದೆ. ಕ್ರೀಡೆಯಲ್ಲಿ ಸೋಲು ಗೆಲುವು ಸರ್ವೇಸಾಮಾನ್ಯ, ಆದರೆ ಸೋತೆ ಎನ್ನುವುದನ್ನು ಬಿಟ್ಟು ಸಾಧನೆಯ ಶಿಖರ ಏರಲು ಪ್ರಯತ್ನಿಸಿ ಎಂದು ಕ್ರೀಡಾಳುಗಳಿಗೆ ಕರೆ ಇತ್ತರು.
ರಾಜ್ಯ ದೈಹಿಕ ಶಿಕ್ಷಣ ಶಿಕ್ಷಕ ಸಂಘದ ಅಧ್ಯಕ್ಷ ವಿಜಯ ಕುಮಾರ್ ಶೆಟ್ಟಿ ಮಾತನಾಡಿ, ಪ್ರಸ್ತುತ ದೈಹಿಕ ಶಿಕ್ಷಕರ ಕೊರತೆ ಎದುರಿಸುತ್ತಿದ್ದೇವೆ. ಸರಕಾರ ಹೆಚ್ಚಿನ ಮುತುವರ್ಜಿ ವಹಿಸಿ ಖಾಲಿಯಾಗಿರುವ ದೈಹಿಕ ಶಿಕ್ಷಕರನ್ನು ಭರ್ತಿ ಮಾಡಬೇಕು. ತನ್ಮೂಲಕ ಕ್ರೀಡೆಗೆ ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬ್ರಹ್ಮಾವರ ತಾ. ಪಂ ಮಾಜಿ ಅಧ್ಯಕ್ಷೆ ಜ್ಯೋತಿ ಉದಯ್ ಕುಮಾರ್ ವಹಿಸಿದ್ದರು. ಬ್ರಹ್ಮಾವರ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಟಿ ನಾಯಕ್, ಉಡುಪಿ ಜಿಲ್ಲಾ ಅಮೇಚುರ್ ಕಬಡ್ಡಿ ಅಸೋಸಿಯೇಷನ್ ಅಧ್ಯಕ್ಷ ರಾಜೇಂದ್ರ ಸುವರ್ಣ, ಕೋಟ ಪಡುಕರೆ ಲಕ್ಷ್ಮೀ ಸೋಮ ಬಂಗೇರ, ಪ್ರಥಮದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವರ್, ಮಣೂರು ಪಡುಕರೆ ಪಿಯು ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರಕಾಶ್ ಶೆಟ್ಟಿ ಕಾರ್ಯಕ್ರಮದಲ್ಲಿದ್ದರು.
Kshetra Samachara
25/08/2022 11:59 am