ಸುಳ್ಯ: ಸುಳ್ಯದಲ್ಲಿ ನಡೆಯುತ್ತಿರುವ ರಾಷ್ಟ್ರೀಯ ವಾಲಿಬಾಲ್ ಪಂದ್ಯಾಟದಲ್ಲಿ ಮಹಿಳಾ ವಿಭಾಗದಲ್ಲಿ ಕೇರಳ ಪೊಲೀಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಇಂದು ನಡೆದ ಫೈನಲ್‌ನಲ್ಲಿ ಕೇರಳ ಪೊಲೀಸ್ ತಂಡವು ಎಸ್‌ಆರ್‌ಎಂ ಚೆನ್ನೈ ತಂಡವನ್ನು ನೇರ ಸೆಟ್‌ಗಳಿಂದ(25-21,25-18, 25-16) ಪರಾಭವಗೊಳಿಸಿ ಕಪ್ ಎತ್ತಿದೆ.
ಮಹಿಳಾ ವಿಭಾಗದಲ್ಲಿ ಎಸ್ಆರ್‌ಎಂ ಚೆನ್ನೈ ರನ್ನರ್ ಅಪ್ ಆಗಿ ಹೊರ ಹೊಮ್ಮಿದರೆ, ಐಸಿಎಫ್ ಚೆನ್ನೈ ಮೂರನೇ ಸ್ಥಾನ ಹಾಗು ಕರ್ನಾಟಕ ಕ್ಲಬ್ ನಾಲ್ಕನೇ ಸ್ಥಾನ ಪಡೆದುಕೊಂಡಿತು. ಏಕಪಕ್ಷೀಯವಾಗಿ ಸಾಗಿದ ಫೈನಲ್ ಪಂದ್ಯದಲ್ಲಿ ಕೇರಳ ಪೊಲೀಸ್ ತಂಡ ಆರಂಭದಿಂದ ಅಂತ್ಯದವರೆಗೂ ಮುನ್ಬಡೆ ಪಡೆಯುತ್ತಾ ಸಾಗಿತು. ಎಸ್‌ಆರ್‌ಎಂ ತಂಡ ಉತ್ತಮ ಆಟದ ಮೂಲಕ ಉತ್ತಮ ಅಂಕ ಗಳಿಸುತ್ತಾ ಸಾಗಿದರೂ ಬಲಿಷ್ಠ ಕೇರಳ ಪೊಲೀಸ್ ಓಟಕ್ಕೆ ತಡೆ ನೀಡಲು ಸಾಧ್ಯವಾಗಿಲ್ಲ. ಮೊದಲ ಸೆಟ್‌ನಲ್ಲಿ ರೋಸ್ನಾ ಜಾನ್, ಅಂಜುಮೋಳ್ ಶಕ್ತಿಶಾಲಿ ಹೊಡೆತಗಳಿಗೆ, ತಂತ್ರಗಾರಿಕೆಯ ಪ್ಲೇಸಿಂಗ್‌ಗಳಿಗೆ ಎಸ್‌ಆರ್‌ಎಂ ಬಳಿ ಉತ್ತರ ಇರಲಿಲ್ಲ. ಆದರೆ ಕೊನೆಯ ಕ್ಷಣದಲ್ಲಿ ಕೆಲವೊಂದು ಅಂಕಗಳನ್ನು ಗಳಿಸಿ ಹೋರಾಟ ನಡೆಸಿದರೂ ಪ್ರಥಮ ಸೆಟ್ಟನ್ನು 25-21 ಅಂತರದಲ್ಲಿ ಕೇರಳ ಪೊಲೀಸ್ ಗೆದ್ದುಕೊಂಡಿತು. ಎರಡನೇ ಸೆಟ್‌ನಲ್ಲಿ ರೋಶ್ನಾ ಜಾನ್ ಭರ್ಜರಿ ಸ್ಮಾಶ್ ಮೂಲಕ ಕೇರಳ ಪೊಲೀಸ್ ಖಾತೆ ತೆರೆದರೂ ಸಂಘಟಿತ ಹೋರಾಟದ ಮೂಲಕ ಎಸ್‌ಆರ್‌ಎಂ ಕೆಲವು ಅಂಕ ಪಡೆದು ಮುನ್ನಡೆಯಿತು.
ಉತ್ತಮ ಹೊಡೆತ ಹಾಗು ತಡೆ ಮೂಲಕ ಕೇರಳ ಪೊಲೀಸ್ ಮತ್ತೆ ಮುನ್ನಡೆ ಕಾಯ್ದುಕೊಂಡಿತು. ನಿರಂತರ ಅಂಕ ಗಳಿಸುತ್ತಾ ಮುನ್ನಡೆದ ಕೇರಳ ಪೊಲೀಸ್ 25-18 ಅಂತರದಲ್ಲಿ ಅನಾಯಾಸವಾಗಿ ಎರಡನೇ ಸೆಟ್ ಗೆದ್ದುಕೊಂಡಿತು.ಮೂರನೇ ಸೆಟ್‌ನಲ್ಲಿ ಎಸ್‌ಆರ್‌ಎಂ ತಂಡ ಕೆಲವು ಉತ್ತಮ ಆಟ ಪ್ರದರ್ಶಿಸಿದರೂ ಕೇರಳ ತಂಡದ ಆಟಗಾರರ ಭರ್ಜರಿ ಹೊಡೆತ ಹಾಗು ತಡೆ, ಆಕರ್ಷಕ ಕ್ಷೇತ್ರ ರಕ್ಷಣೆ ಮತ್ತು ಸೂಪರ್ ಸರ್ವ್ ಮೂಲಕ ಪೊಲೀಸ್ ತಂಡ ಮುನ್ನುಗ್ಗಿತು. ಅಂತಿಮವಾಗಿ 25-16 ಅಂತರದಲ್ಲಿ ಸೆಟ್ ಹಾಗು ಪಂದ್ಯ ಗೆದ್ದು ಚಾಂಪಿಯನ್ ಪಟ್ಟ ಅಲಂಕರಿಸಿತು.
PublicNext
08/05/2022 10:33 pm