ಬಜಪೆ: ಸದೃಢ ಬದುಕಿಗೆ ಕ್ರೀಡಾ ಚಟುವಟಿಕೆಗಳು ಅತ್ಯಗತ್ಯ. ಕ್ರೀಡೆಯಿಂದ ದೇಹ ಮತ್ತು ಮನಸ್ಸು ಸಶಕ್ತವಾಗುವ ಜತೆಗೆ ಉತ್ತಮ ವ್ಯಕ್ತಿತ್ವ ರೂಪುಗೊಳ್ಳುವುದರೊಂದಿಗೆ ಸಾಧನೆಯ ಪಥದಲ್ಲಿ ಸಾಗಲು ಸಾಧ್ಯ ಎಂದು ದೈಹಿಕ ಶಿಕ್ಷಣ ಇಲಾಖೆ ಮೈಸೂರು ವಿಭಾಗದ ವಿಭಾಗೀಯ ಉಪ ನಿರ್ದೇಶಕ ಎಚ್.ಡಿ ವೆಂಕಟೇಶ್ ಮೂರ್ತಿ ಅವರು ಹೇಳಿದರು.
ಅವರು ಬಜಪೆ ಸೈಂಟ್ ಜೋಸೆಫ್ ಪಿಯು ಕಾಲೇಜು ಕ್ರೀಡಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ದೈಹಿಕ ಶಿಕ್ಷಣ ಇಲಾಖೆ ಮೈಸೂರು ವಿಭಾಗ, ದ.ಕ.ಜಿ.ಪಂ. ಉಪನಿರ್ದೇಶಕರ ಕಛೇರಿ ಆಡಳಿತ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮಂಗಳೂರು ಉತ್ತರ ವಲಯ ಹಾಗೂ ಸೈಂಟ್ ಜೋಸೆಫ್ ಪಿಯು ಕಾಲೇಜು ಬಜಪೆ ಇವರ ಸಂಯುಕ್ತ ಸಹಯೋಗದಲ್ಲಿ ಪ್ರಾರಂಭಗೊಂಡ ಎರಡು ದಿನಗಳ ಮೈಸೂರು ವಿಭಾಗ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಫುಟ್ಬಾಲ್ ಪಂದ್ಯಾವಳಿಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬಜಪೆ ಸೈಂಟ್ ಜೋಸೆಪ್ ಸಮೂಹ ಶಿಕ್ಷಣ ಸಂಸ್ಥೆಗಳ ಸಂಚಾಲಕ ರೆ.ಫಾ ರೊನಾಲ್ಡ್ ಕುಟಿನ್ಹೋ ಪಂದ್ಯಾವಳಿಯನ್ನು ಉದ್ಘಾಟಿಸಿದರು. ಮೈಸೂರು, ಮಂಡ್ಯ, ಹಾಸನ, ಕೊಡಗು, ಚಾಮರಾಜನಗರ, ಚಿಕ್ಕಮಗಳೂರು, ಉಡುಪಿ ಹಾಗೂ ದ.ಕ ಜಿಲ್ಲೆಗಳನ್ನು ಪ್ರತಿನಿಧಿಸುವ ಪ್ರಾಥಮಿಕ ಶಾಲಾ ವಿಭಾಗದ ಹಾಗೂ ಪ್ರೌಢಶಾಲಾ ವಿಭಾಗದ ತಲಾ 8 ತಂಡಗಳ 500 ಕ್ರೀಡಾಪಟುಗಳು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದು ಆರಂಭಿಕವಾಗಿ ಪ್ರಾಥಮಿಕ ವಿಭಾಗದ 14ರ ಕೆಳಹರೆಯದ ವಿಭಾಗದಲ್ಲಿ ಮಂಡ್ಯ ಹಾಗೂ ಹಾಸನ, ಪ್ರೌಢಶಾಲಾ ವಿಭಾಗದ 17ರ ಕೆಳ ಹರೆಯದ ವಿಭಾಗದಲ್ಲಿ ದ.ಕ ಹಾಗೂ ಉಡುಪಿ ಜಿಲ್ಲಾ ತಂಡಗಳ ಮಧ್ಯೆ ಆರಂಭಿಕ ಪಂದ್ಯಗಳು ನಡೆದವು.ಸೆಮಿಫೈನಲ್, ಫೈನಲ್ ಪಂದ್ಯಾವಳಿಗಳು ಇಂದು ನಡೆಯಲಿದ್ದು ಅ.14ರಂದು ಶಿವಮೊಗ್ಗದಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಪಂದ್ಯಾವಳಿಯಲ್ಲಿ ಮೈಸೂರು ವಿಭಾಗವನ್ನು ಪ್ರತಿನಿಧಿಸುವ ಎರಡೂ ವಿಭಾಗಗಳ ತಂಡಗಳು ಘೋಷಣೆಯಾಗಲಿದೆ.
ವೇದಿಕೆಯಲ್ಲಿ ಬಜಪೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪೂರ್ಣಕಲಾ ವೈ. ಕೆ., ಕಾಲೇಜಿನ ಪ್ರಾಂಶುಪಾಲ ರಾಮಕೃಷ್ಣ ಉಡುಪ, ದೈಹಿಕ ಶಿಕ್ಷಣ ಇಲಾಖೆಯ ಮೈಸೂರು ವಿಭಾಗ, ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು, ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪ್ರೌಢಶಾಲಾ ಮುಖ್ಯ ಶಿಕ್ಷಕ ಆಲ್ವಿನ್ ನೊರೊನ್ನಾ, ಪ್ರಮುಖರಾದ ಕೃಷ್ಣ ಕಲ್ಲೋಡಿ, ಸಂತೋಷ ಡಿಸೋಜ ಹಾಗೂ ಮೊದಲಾದವರು ಉಪಸ್ಥಿತರಿದ್ದರು. ಮೋಹನ್ ಎಸ್. ಕಾರ್ಯಕ್ರಮ ನಿರೂಪಿಸಿದರು. ದೈಹಿಕ ಶಿಕ್ಷಣ ಶಿಕ್ಷಕರಾದ ಸಂತೋಷ್, ಅಶ್ವತ್ಥ್ ಕಟೀಲ್ ಸಹಕರಿಸಿದರು.
Kshetra Samachara
27/09/2022 09:17 pm