ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಂಗಳೂರು: ಶ್ರೀ ವೆಂಕಟರಮಣ ದೇವಸ್ಥಾನದ ಶಾರದೆಗೆ ವಾರಣಾಸಿ ಮುಸ್ಲಿಂ ನೇಕಾರರ ಸೀರೆ!

ಮಂಗಳೂರು: ನಗರದ ರಥಬೀದಿಯ ಶ್ರೀ ವೆಂಕಟರಮಣ ದೇವಸ್ಥಾನದ ಆಚಾರ್ಯ ಮಠದ ಶಾರದಾ ಮಹೋತ್ಸವಕ್ಕೆ ಈ ವರ್ಷ ಶತಮಾನದ ಸಂಭ್ರಮ. ಈ ಬಾರಿ ಇಲ್ಲಿನ ಶಾರದಾ ಮಾತೆಯು ವಾರಣಾಸಿಯ ಮುಸ್ಲಿಂ ನೇಕಾರರು ನೇಯ್ದ ಬಂಗಾರದ ಹೂವಿನಿಂದ ಕೂಡಿರುವ ಹೊನ್ನಿನ ಜರಿಯುಳ್ಳ ಸೀರೆಯಲ್ಲಿ ಕಂಗೊಳಿಸಲಿದ್ದಾಳೆ.

1922ರಲ್ಲಿ ಆರಂಭವಾದ ಇಲ್ಲಿನ ಶಾರದಾ ಮಹೋತ್ಸವವು ಈ ಬಾರಿ ನೂರು ವರ್ಷದ ಸಂಭ್ರಮದಲ್ಲಿದೆ. ಮಂಗಳೂರಿನ ಪ್ರಖ್ಯಾತ ವಸ್ತ್ರ ಮಳಿಗೆ ಕುಲ್ಯಾಡಿಕರ್ಸ್ ನೂತನ್ ಸಿಲ್ಕ್ ನ‌ ಸಹೋದರರು ತಮ್ಮ ತಾಯಿಯ ನೆನಪಿಗಾಗಿ 1988ರಿಂದ ಶಾರದೆಗೆ ಉಡಿಸಲು ಒಂದು ದಿನದ ಸೀರೆಯನ್ನು ಹರಕೆಯ ರೂಪದಲ್ಲಿ ನೀಡುತ್ತಿದ್ದಾರೆ. ಅದರಂತೆ ಈ ಬಾರಿಯೂ 8 ಮೀ. ಹರವಿನ ಬನಾರಸ್ ಸೀರೆಯನ್ನು ನೀಡಲಿದ್ದಾರೆ‌. ವಿಶೇಷವೆಂದರೆ ವಾರಣಾಸಿಯ ಜ್ಞಾನವಾಪಿ ಮಸೀದಿಯ ಸಮೀಪದ ನೂರುಲ್ಲಾ ಅಮೀರ್ ಎಂಬ ಮುಸ್ಲಿಂ ನೇಕಾರರ ಕುಟುಂಬವೊಂದು ಈ ಸೀರೆಯನ್ನು ಒಂದೂವರೆ ತಿಂಗಳ ಶ್ರಮದಿಂದ ಕೈಯಿಂದಲೇ ನೇಯ್ಗೆ ಮಾಡಿ ತಯಾರಿಸಿದೆ. ಅಲ್ಲದೆ, ಒಂದು ವಾರದ ನಾಲ್ವರ ಶ್ರಮದಲ್ಲಿ ಸೀರೆಗೆ ಸಂಪೂರ್ಣ ಕಸೂತಿಯನ್ನು ಹೆಣೆಯಲಾಗಿದೆ.

ಕಡು ಹಸಿರು ಬಣ್ಣದ ಈ ಸೀರೆಯಲ್ಲಿ ಸರಿಸುಮಾರು 2,600 ಬಂಗಾರದ ಹೂವಿದೆ. ಅಲ್ಲದೆ, ಬೆಳ್ಳಿಗೆ ಬಂಗಾರದ ಕೋಟಿಂಗ್ ಇರುವ ಜರಿಯಿಂದಲೇ ಕಸೂತಿ ಹೆಣೆಯಲಾಗಿದೆ. ಸೀರೆಯು ಒಟ್ಟು 11 ಪವನ್ ಚಿನ್ನ ಹಾಗೂ 700 ಗ್ರಾಂ ಬೆಳ್ಳಿಯನ್ನು ಹೊಂದಿದೆ. ಯಾವತ್ತೂ 60-70 ಸಾವಿರ ರೂ‌. ಬೆಲೆಯ ಸೀರೆಯನ್ನು ಕೊಡುವ ಕುಲ್ಯಾಡಿಕರ್ಸ್ ಸಹೋದರರು ಈ ಬಾರಿ ತಾಯಿ ಶಾರದೆಗೆ ಬರೋಬ್ಬರಿ 8 ಲಕ್ಷ ರೂ. ಬೆಲೆಯ ಸೀರೆಯನ್ನು ನೀಡಲಿದ್ದಾರೆ‌.

ಈಗಾಗಲೇ ಈ ಸೀರೆ ಮಂಗಳೂರು ತಲುಪಿದ್ದು, ನವರಾತ್ರಿಯ ಆರನೇ ದಿನ ಶಾರದಾ ಮಾತೆಗೆ ಉಡಿಸಲಾಗುತ್ತದೆ. ಒಟ್ಟಿನಲ್ಲಿ ಮುಸ್ಲಿಂ ಕುಟುಂಬದ ಕೈ ಸ್ಪರ್ಶದ ಚಾಕಚಕ್ಯತೆಯಿಂದ ಹೆಣೆಯಲಾಗಿರುವ ಈ ಸೀರೆ ಶಾರದಾ ಮಾತೆಯ ಅಲಂಕಾರವಾಗಿ ಉಡಿಸಲಾಗುತ್ತಿರುವುದು ಕರಾವಳಿಯಲ್ಲಿ ಇನ್ನೂ ಹಿಂದೂ - ಮುಸ್ಲಿಂ ಸೌಹಾರ್ದತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Edited By : Manjunath H D
PublicNext

PublicNext

23/09/2022 07:18 pm

Cinque Terre

40.52 K

Cinque Terre

6

ಸಂಬಂಧಿತ ಸುದ್ದಿ