ವಿಶೇಷ ವರದಿ: ಜಯಶೇಖರ್ ಮಡಪ್ಪಾಡಿ
ಕುಂದಾಪುರ: ಕುಂದಾಪುರ ಎಲ್ಲದರಲ್ಲಿಯೂ ಹೆಸರುವಾಸಿ. ಶಿಕ್ಷಣದಲ್ಲಿ ಎತ್ತಿದ ಕೈ. ಮೀನುಗಾರಿಕೆಯಲ್ಲಿಯೂ ಮುಂಚೂಣಿ. ಸಾಧನೆಯಲ್ಲಿಯೂ ಮುಂದೆ... ಅದರಂತೆ ಧಾರ್ಮಿಕ ಕ್ಷೇತ್ರಗಳಿಗೂ ಹೆಸರುವಾಸಿ.
ಇಂತಿರ್ಪ ಕುಂದಾಪುರದಲ್ಲಿ ಬಹಳ ಅಪರೂಪವೆಂಬಂತಿರುವುದೇ ಈ ಬಯಲು ಗಣಪತಿ ದೇವಸ್ಥಾನ. ತಾಲೂಕಿನ ಕೊಡ್ಲಾಡಿ ಗ್ರಾಮದ ಅತಿ ಎತ್ತರದ ಗುಡ್ಡದಲ್ಲಿ ನೆಲಮಟ್ಟದಿಂದ ಒಂದು ಸಾವಿರ ಮೀಟರ್ ಎತ್ತರದಲ್ಲಿ ರಾರಾಜಿಸುತ್ತಿದ್ದಾನೆ ಈ ಬಯಲುವಾಸಿ ಗಣೇಶ. ಇಂದು ಇಲ್ಲಿ ಸಂಭ್ರಮದ ಗಣೇಶೋತ್ಸವ ನಡೆಯಿತು.
ಅನಾದಿ ಕಾಲದಿಂದಲೂ ಋಷಿಮುನಿಗಳ ತಪೋಶಕ್ತಿಯಿಂದ 12 ಇಂಚು ವ್ಯಾಸದ ಅತಿ ಚಿಕ್ಕ ಬಾವಿ ಮೂಲಕ ಉದ್ಭವಿಸಿದ ಗಣಪತಿ ಇಲ್ಲಿ ನೆಲೆಯಾಗಿದ್ದಾನೆ. ಮಂದಿರವೇ ಇಲ್ಲದ ಗಣಪತಿ ಬರಬರುತ್ತಾ ಬಯಲು ಗಣಪತಿ ಎಂದು ಖ್ಯಾತನಾಗುತ್ತಾನೆ.
ಬಳಿಕ ಶಿಥಿಲಾವಸ್ಥೆಯಲ್ಲಿದ್ದ ಗಣೇಶನ ನೆಲೆಯನ್ನು ಜೀರ್ಣೋದ್ಧಾರಗೊಳಿಸಿ ಮಂದಿರ ನಿರ್ಮಿಸಬೇಕು ಎಂದು ಪ್ರಶ್ನೆಯಿಟ್ಟಾಗ ಗಣಪತಿ ದೇವರಿಗೆ ಛಾವಣಿ ಮಾಡುವಂತಿಲ್ಲ ಎನ್ನಲಾಯಿತು. ಇದರಿಂದ ಹೊರಕ್ಕೆ ಮಂದಿರ ನಿರ್ಮಿಸಿದರೂ ಗರ್ಭಗುಡಿಗೆ ಛಾವಣಿ ಮಾಡದೆ ಬಯಲು ಮಾಡಲಾಯಿತು. ಉದ್ಯಮಿ ಬಾಂಡ್ಯ ಸುಭಾಶ್ಚಂದ್ರ ಶೆಟ್ಟಿಯವರ ಮುಂದಾಳತ್ವದಲ್ಲಿ ಈಗ ಸಂಕಷ್ಟಿ, ಚತುರ್ಥಿ ಹಾಗೂ ಇನ್ನಿತರ ಧಾರ್ಮಿಕ ಕಾರ್ಯ ನಡೆಯುತ್ತಿವೆ.
ದೇವಸ್ಥಾನ ಪುರಾತನವಾದರೂ ಗುಡ್ಡದ ಮೇಲಿರುವುದರಿಂದ ಪ್ರಸಿದ್ಧಿಗೆ ಬಂದಿಲ್ಲ. ಕಳೆದ ವರ್ಷವಷ್ಟೇ ಬ್ರಹ್ಮಕಲಶವಾಗಿದ್ದು, ಹೊರಜಿಲ್ಲೆಗಳಿಂದ ಭಕ್ತರು ಆಗಮಿಸುತ್ತಿದ್ದಾರೆ. ಇಲ್ಲಿ ಚೌತಿಗೆ ಅಕ್ಕಿ ಮುಡಿ, ಕಡುಬು ಗಣೇಶನಿಗೆ ಬಹು ಪ್ರಿಯ.
ಒಟ್ಟಾರೆಯಾಗಿ ಕೊಡ್ಲಾಡಿ ಗುಡ್ಡೆಯಲ್ಲಿರುವ ಬಯಲು ಗಣಪತಿ, ಸೌತಡ್ಕ ಗಣಪತಿಯ ಬಳಿಕ 2ನೇ ಸ್ಥಾನ ಪಡೆದಿದ್ದು, ರಾಜ್ಯದ ಪ್ರವಾಸಿ ತಾಣವಾಗುವುದರಲ್ಲಿ ಅನುಮಾನವಿಲ್ಲ.
Kshetra Samachara
01/09/2022 12:11 pm