ಮುಲ್ಕಿ : ಮುಲ್ಕಿ ಸೀಮೆಯ ಒಂಬತ್ತು ಮಾಗಣೆಯ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಕೊರಳ ಹಬ್ಬ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದಲ್ಲಿ ಪ್ರಾತಕಾಲ ಅರ್ಚಕ ಶ್ರೀಪತಿ ಉಪಾಧ್ಯಾಯ ಹಾಗೂ ನರಸಿಂಹ ಭಟ್ ನೇತೃತ್ವದಲ್ಲಿ ವಿಶೇಷ ಪ್ರಾರ್ಥನೆ ನಡೆದು ದೇವಸ್ಥಾನದ ಎದುರು ಭಾಗದ ಗದ್ದೆಯಲ್ಲಿ ಭತ್ತದ ತೆನೆಗೆ ಪೂಜೆ ಸಲ್ಲಿಸಿ ವಾದ್ಯ ಘೋಷದೊಂದಿಗೆ ಭತ್ತದ ತೆನೆಯನ್ನು ಪಲ್ಲಕ್ಕಿಯಲ್ಲಿ ದೇವಸ್ಥಾನಕ್ಕೆ ತಂದು ಶ್ರೀ ದೇವರಿಗೆ ವಿಶೇಷ ಪೂಜೆ ನಡೆಯಿತು.
ಬಳಿಕ ಶ್ರೀ ದೇವರಿಗೆ ಹಣ್ಣು ಕಾಯಿ ನಡೆದು ಭಕ್ತರಿಗೆ ತೆನೆಯನ್ನು ಪ್ರಸಾದ ರೂಪದಲ್ಲಿ ವಿತರಿಸಲಾಯಿತು.
ಈ ಸಂದರ್ಭ ದೇವಸ್ಥಾನದ ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತರು ಮಾತನಾಡಿ ಕರಾವಳಿ ಭಾಗದಲ್ಲಿ ಕೊರಳ ಹಬ್ಬಕ್ಕೆ ವಿಶೇಷ ಸ್ಥಾನಮಾನವಿದ್ದು ಪೂರ್ವಕಾಲದಿಂದಲೂ ಭಕ್ತರು ಆಚರಿಸುತ್ತಾ ಬಂದಿದ್ದಾರೆ ಎಂದರು.
ಕೊರಳ ಹಬ್ಬದ ಪ್ರಯುಕ್ತ ರಾಜ್ಯೋತ್ಸವ ಪ್ರಶಸ್ತಿ ವಿಜೇತ ನಾಗಸ್ವರ ವಾದಕ ನಾಗೇಶ್ ಪಪ್ಪನಾಡು ರವರಿಂದ ವಿಶೇಷ ನಾಗಸ್ವರ ವಾದನ ನಡೆಯಿತು.
ದೇವಸ್ಥಾನದ ಆಡಳಿತ ಮೊಕ್ತೇಸರ ಮನೋಹರ ಶೆಟ್ಟಿ, ರಂಗಕರ್ಮಿ ಚಂದ್ರಶೇಖರ ಸುವರ್ಣ, ಅಕೌಂಟೆಂಟ್ ಶಿವ ಶಂಕರ್, ಬ್ರಹ್ಮಕಲಶೋತ್ಸವ ಸಮಿತಿಯ ಸುನಿಲ್ ಆಳ್ವ,ಕಿಶೋರ್ ಶೆಟ್ಟಿ ಬಪ್ಪನಾಡು,ಭಕ್ತಾದಿಗಳು ಉಪಸ್ಥಿತರಿದ್ದರು.
Kshetra Samachara
30/08/2022 08:46 am