ವರದಿ: ವಿಶ್ವನಾಥ ಪಂಜಿಮೊಗರು
ಮಂಗಳೂರು: ಕೋವಿಡ್ ಲಾಕ್ ಡೌನ್ ಎಲ್ಲರನ್ನೂ ಮನೆಯಲ್ಲೇ ಲಾಕ್ ಆಗಿಸಿ ಸಂಕಷ್ಟಕ್ಕೆ ಸಿಲುಕಿಸಿದ್ದರೂ ತಾಂತ್ರಿಕವಾಗಿ ನಾವೆಲ್ಲಾ ಪ್ರಬಲರಾದದ್ದಂತೂ ಸುಳ್ಳಲ್ಲ. ಇದೇ ರೀತಿ ಆನ್ ಲೈನ್ ತಂತ್ರಜ್ಞಾನವನ್ನು ಬಳಸಿಕೊಂಡು ಅಂತಾರಾಷ್ಟ್ರೀಯ ಕೃಷ್ಣ ಪ್ರಜ್ಞ ಸಂಘ ಇಸ್ಕಾನ್ ಸದ್ದಿಲ್ಲದೆ ಆಸಕ್ತ ಮಂದಿಗೆ 'ಆನ್ ಲೈನ್ ಗೀತಾ 18' ಎಂಬ ವೇದಿಕೆ ಸೃಷ್ಟಿಸಿತ್ತು. ಈವರೆಗೆ ಇದರ ಲಾಭ ಪಡೆದವರು ಬರೋಬ್ಬರಿ 70 ದೇಶಗಳ 7 ಲಕ್ಷ ಮಂದಿ!
ಹೌದು... ಮಂಗಳೂರಿನ ನಂತೂರಿನಲ್ಲಿರುವ ಇಸ್ಕಾನ್ ಆನ್ ಲೈನ್ ಮೂಲಕ ಆಸಕ್ತರಿಗೆ 2020ರ ಜೂನ್ ನ ಲಾಕ್ ಡೌನ್ ವೇಳೆ ಉಚಿತವಾಗಿ ಭಗವದ್ಗೀತೆ ಬೋಧನೆ ಮಾಡಲು ಆರಂಭಿಸಿತು. ಇದೇ ಸ್ಫೂರ್ತಿಯಿಂದಲೇ ಆ ಬಳಿಕ ದೇಶ - ವಿದೇಶಗಳಲ್ಲಿ ಕಾರ್ಯಾಚರಿಸುವ ಇಸ್ಕಾನ್, ವಿವಿಧ ಭಾಷೆಗಳಲ್ಲಿ 'ಆನ್ ಲೈನ್ ಗೀತಾ 18' ಆರಂಭಿಸಿತು.
ಇದೀಗ ತುಳು, ಕನ್ನಡ ಇಂಗ್ಲಿಷ್, ಹಿಂದಿ, ಕೊಂಕಣಿ, ತಮಿಳು, ತೆಲುಗು, ಮಲೆಯಾಳಂ, ಬೆಂಗಾಳಿ, ಒಡಿಯಾ, ಗುಜರಾತಿ, ಮರಾಠಿ ಭಾಷೆಗಳಲ್ಲೂ ಆನ್ ಲೈನ್ ಭಗವದ್ಗೀತಾ ಬೋಧನೆ ಲಭ್ಯವಿದೆ. ವಿಶೇಷವೆಂದರೆ ತುಳುವಿನ ಭಗವದ್ಗೀತೆ ಬೋಧನಾ ತರಗತಿಗೆ ಬಹಳಷ್ಟು ಸ್ಥಳೀಯರು ಆಕರ್ಷಿತರಾಗಿದ್ದಾರೆ. ದಕ್ಷಿಣ ಕನ್ನಡ, ಉಡುಪಿ ಮಾತ್ರವಲ್ಲದೆ ಬೇರೆ ರಾಜ್ಯಗಳಲ್ಲಿ ನೆಲೆಸಿರುವ ತುಳು ಭಾಷಿಗರು ನಿತ್ಯವೂ ಸದುಪಯೋಗ ಪಡೆಯುತ್ತಿದ್ದಾರೆ. ಇದು ತುಳು ಭಾಷೆಯಲ್ಲಿ ಭಗವದ್ಗೀತೆ ಬೋಧನೆಯ ಪ್ರಪ್ರಥಮ ಪ್ರಯತ್ನ.
ನಿತ್ಯವೂ ಬೆಳಗ್ಗೆ 6, ರಾತ್ರಿ 8 ಹಾಗೂ ಮಧ್ಯಾಹ್ನ ಸಮಯದಲ್ಲೂ ಆನ್ಲೈನ್ ನಲ್ಲಿ ಭಗವದ್ಗೀತಾ ಬೋಧನೆ ಮಾಡಲಾಗುತ್ತದೆ. ಮಕ್ಕಳಿಗೆ, ಯುವ ಜನತೆಗೆ ಹಾಗೂ ಹಿರಿಯರಿಗೆ ಪ್ರತ್ಯೇಕ ತರಗತಿ ಲಭ್ಯ. ಒಂದೊಂದು ತರಗತಿಯಲ್ಲಿ 300-400 ರಷ್ಟು ಮಂದಿಯಿದ್ದು, ಈಗಾಗಲೇ 27 ಬ್ಯಾಚ್ ಸಂಪೂರ್ಣವಾಗಿದೆ. ಈ ಮೂಲಕ ಇಸ್ಕಾನ್ 18 ದಿನಗಳಲ್ಲಿ ಭಗವದ್ಗೀತೆಯ 18 ಯೋಗಗಳನ್ನು ಆಸಕ್ತರಿಗೆ ಅರಿತುಕೊಳ್ಳುವುದಕ್ಕೆ ಸಹಕರಿಸುತ್ತಿದೆ. ವಿಶೇಷವೆಂದರೆ ತುಳು ಭಗವದ್ಗೀತಾ ಆನ್ ಲೈನ್ ತರಗತಿ 365 ದಿನವೂ ಲಭ್ಯ.
ತುಳು ಭಗವದ್ಗೀತಾ ತರಗತಿಯನ್ನು ಮಂಗಳೂರಿನವರೇ ಆದ ಗುರುರಾಜ್ ಪ್ರಭು ತೆಗೆದುಕೊಳ್ಳುತ್ತಾರೆ. ಇವರು ಬಿಬಿಎ ಪದವೀಧರರಾಗಿದ್ದು, ಮಸ್ಕತ್ ನಲ್ಲಿ ವೃತ್ತಿ ನಿರ್ವಹಿಸುತ್ತಿದ್ದರು. ಲಾಕ್ ಡೌನ್ ವೇಳೆ ಇಸ್ಕಾನ್ ನ 'ಆನ್ ಲೈನ್ ಗೀತಾ 18' ಬೋಧನೆಯ ಸದುಪಯೋಗ ಪಡೆದ ಅವರು, ಆ ಬಳಿಕ ಇಸ್ಕಾನ್ ಮಂಗಳೂರಿನ ಪ್ರಮುಖರ ಸಲಹೆಯಂತೆ ತುಳುವಿನಲ್ಲಿ ಭಗವದ್ಗೀತಾ ಬೋಧನೆ ಮಾಡಲಾರಂಭಿಸಿದ್ದರು.
ಆ ನಂತರ ಗುರುರಾಜ್ ಪ್ರಭು ಮನಪರಿವರ್ತನೆಗೊಂಡು ಮಸ್ಕತ್ ನ ಉದ್ಯೋಗ ತೊರೆದು ಮಂಗಳೂರಿನ ಇಸ್ಕಾನ್ ನಲ್ಲಿಯೇ ಆಸಕ್ತರಿಗೆ ತುಳುವಿನಲ್ಲಿ ಭಗವದ್ಗೀತೆ ಬೋಧನೆ ಮಾಡುತ್ತಿದ್ದಾರೆ. ಇಸ್ಕಾನ್ ನ ಈ ಪ್ರಯತ್ನದಿಂದ ಬಹಳಷ್ಟು ಮಂದಿ ಸಾತ್ವಿಕ ಆಹಾರವನ್ನೇ ಸ್ವೀಕರಿಸುವ, ಪ್ರಾಪಂಚಿಕ ಸಂತೋಷ ತ್ಯಜಿಸಿ ಆಧ್ಯಾತ್ಮಿಕದತ್ತ ಚಿತ್ತ ಹರಿಸಿದ್ದಾರಂತೆ. ಇದುವೇ ರಾಮರಾಜ್ಯಕ್ಕೆ ಅಡಿಪಾಯ ಎಂಬುದು ಇಸ್ಕಾನ್ ಅಭಿಪ್ರಾಯ. ಆಸಕ್ತರು http://t.ly/gita ಅಥವಾ 8921447472 ವಾಟ್ಸ್ಆ್ಯಪ್ ಸಂಖ್ಯೆ ಮೂಲಕ 'ಆನ್ ಲೈನ್ ಗೀತಾ 18' ಪ್ರಯೋಜನ ಪಡೆಯಬಹುದು.
Kshetra Samachara
18/08/2022 09:48 am