ಮಂಗಳೂರು : ಕರಾವಳಿಯಲ್ಲಿ ದೈವಾರಾಧನೆಗೆ ಬಹಳ ಪ್ರಾಶಸ್ತ್ಯ. ದೈವಗಳೆಂಬ ಅತಿಮಾನುಷ ಶಕ್ತಿಯನ್ನು ಜನರು ಭಯ-ಭಕ್ತಿಯಿಂದ ನಂಬಿಕೊಂಡು ಆರಾಧನೆ ಮಾಡುತ್ತಾ ಬರುತ್ತಾರೆ. ಇಂತಹ ದೈವಗಳಿಗೆ ವಾರ್ಷಿಕವಾಗಿ ಕೋಲ, ನೇಮ, ಅಗೇಲು ಮುಂತಾದ ಸೇವೆಗಳನ್ನು ನೀಡಿ ಸಂತೃಪ್ತಿ ಗೊಳಿಸುವ ಕ್ರಮವಿದೆ.
ಒಂದೊಂದು ದೈವಗಳೂ ಒಂದೊಂದು ವಿಶೇಷತೆಯನ್ನು ಹೊಂದಿರುತ್ತದೆ. ಅವುಗಳಲ್ಲಿ ವಿಷ್ಣುಮೂರ್ತಿ ದೈವವೂ ಒಂದು. ವಿಷ್ಣುಮೂರ್ತಿ ದೈವವನ್ನು ನರಸಿಂಹಾವತಾರದ ಪ್ರತೀಕವಾಗಿ ಆರಾಧನೆ ಮಾಡಿಕೊಂಡು ಬರಲಾಗುತ್ತದೆ. ಈ ವಿಷ್ಣುಮೂರ್ತಿ ದೈವಕ್ಕೆ ವಾರ್ಷಿಕ ಆರಾಧನೆಯ ಭಾಗವಾಗಿ ಒತ್ತೆಕೋಲ ನಡೆಯುತ್ತದೆ.
ಒಂದೇ ದೈವದ ಕೃಪೆಗಾಗಿ ನಡೆಯುವ ಸೇವೆಯನ್ನು ಒತ್ತೆಕೋಲ ಎಂದು ಹೇಳಲಾಗುತ್ತದೆ. ಒತ್ತೆಕೋಲದ ವಿಷ್ಣುಮೂರ್ತಿ ದೈವದ ಅಗ್ನಿಸ್ನಾನಕ್ಕೆ ಬೇಕಾಗುವ ಕೊಳ್ಳಿ ಕಡಿಯುವ ಮುಹೂರ್ತಕ್ಕೆ ಬೇಕಾಗುವ ಕಟ್ಟಿಗೆಯನ್ನು ಏಳೆಂಟು ಲಾರಿಗಳಷ್ಟು ಸಂಗ್ರಹ ಮಾಡಲಾಗುತ್ತದೆ. ಈ ಕಟ್ಟಿಗೆಗಳನ್ನು ಒತ್ತೆಕೋಲವಾಗುವ ಗ್ರಾಮದ ಮನೆಗಳಿಂದ ವಂತಿಗೆ ರೂಪದಲ್ಲಿ ಸಂಗ್ರಹಿಸಲಾಗುತ್ತದೆ. ಮನೆಯಲ್ಲಿದ್ದವರ ತಲೆಗಿಷ್ಟು ಕಟ್ಟಿಗೆ, ಜಾನುವಾರುಗಳ ಕಾಲಿಗಿಷ್ಟು ಕಟ್ಟಿಗೆಗಳನ್ನು ವಂತಿಗೆ ರೂಪದಲ್ಲಿ ಪಡೆಯಲಾಗುತ್ತದೆ. ಆದರೆ ಹಾಲು ಉಕ್ಕುವ ಮರಗಳ ಕಟ್ಟಿಗೆಯನ್ನು ಮಾತ್ರ ಬಳಸಲಾಗುತ್ತದೆ. ಹೆಚ್ಚಾಗಿ ಹಲಸಿನ ಮರದ ಕಟ್ಟಿಗೆಗಳನ್ನು ಮಾತ್ರ ಬಳಸಲಾಗುತ್ತದೆ. ಅದರಲ್ಲೂ ಕಾಸರ್ಕನ ಮರ, ಮಾವಿನ ಮರಗಳು ನಿಷಿದ್ಧವಾಗಿದೆ.
ಒತ್ತೆಕೋಲದ ವಿಶೇಷ ಅಂದರೆ ಅಗ್ನಿಕೇಳಿ ಅಥವಾ ಅಗ್ನಿಸ್ನಾನ. ದುಷ್ಟನ ಸಂಹಾರದ ಪ್ರತೀಕವಾಗಿ ವಿಷ್ಣುಮೂರ್ತಿ ದೈವ ಕೆಂಡದ ಮೇಲೆ ಹಾಯುತ್ತದೆ. ಇದು ನೆರೆದಿದ್ದವರಲ್ಲಿ ಭಯಭಕ್ತಿಯನ್ನು ಮೂಡಿಸುತ್ತದೆ. ಆ ಬಳಿಕ ದೈವದ ಬಾರನೆ ಹಾಗೂ ಮಾರಿಕಳ ವಿಧಿವಿಧಾನಗಳನ್ನು ನೆರವೇರಿಸಲಾಗುತ್ತದೆ. ಪ್ರಸಾದ ವಿತರಣೆ ಬಳಿಕ ಒತ್ತೆಕೋಲ ಮುಕ್ತಾಯವಾಗುತ್ತದೆ. ಆದ್ದರಿಂದ ಈ ಎಲ್ಲಾ ಪ್ರಕ್ರಿಯೆಗಳ ಒತ್ತೆಕೋಲವನ್ನು ಅಗ್ನಿಯೊಡನೆ ಆಟವೆಂದು ಹೇಳಲಾಗುತ್ತದೆ. ಈ ಅಗ್ನಿಕೇಳಿಯನ್ನು ಕಣ್ತುಂಬಿಕೊಳ್ಳಲು ಸಾವಿರ ಸಾವಿರ ಮಂದಿ ಒತ್ತೆಕೋಲಕ್ಕೆ ಆಗಮಿಸುತ್ತಾರೆ.
Kshetra Samachara
19/04/2022 04:32 pm