ಪುತ್ತೂರು: ಅತ್ಯಂತ ಪುರಾತನ ದೇವಸ್ಥಾನಗಳಲ್ಲಿ ಒಂದಾದ ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಶಾಂತಿಮುಗೇರಿನ ಸುಬ್ರಹ್ಮಣ್ಯೇಶ್ವರ ದೇವಸ್ಥಾನದ ಬ್ರಹ್ಮ ಕಲಶೋತ್ಸವವು ಎಪ್ರಿಲ್5 ರಿಂದ10ರ ವರೆಗೆ ನಡೆಯಲಿದೆ ಎಂದು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಸವಣೂರು ಸೀತಾರಾಮ ರೈ ಹೇಳಿದರು.
ಪುತ್ತೂರು ಪ್ರೆಸ್ ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ದಕ್ಷಿಣ ಭಾರತದ ಹೆಸರಾಂತ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದಷ್ಟೇ ಪಾವಿತ್ರ್ಯತೆಯನ್ನು ಹೊಂದಿದೆ. ಸುಬ್ರಹ್ಮಣ್ಯ ಸ್ವಾಮಿಯು ತಾರಕಾಸುರನನ್ನು ಸಂಹಾರ ಮಾಡಲು ಸುಬ್ರಹ್ಮಣ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ದಣಿವಾರಿಸಲು ಈ ಪ್ರದೇಶದಲ್ಲಿ ವಿಶ್ರಾಂತಿ ಪಡೆದಿದ್ದನು ಎನ್ನುವ ಐತಿಹ್ಯವಿದೆ. ಮುಂದೆ ಇದೇ ಸ್ಥಳ ಶಾಂತಿಮೊಗರಾಗಿ ಪ್ರಚಲಿತಕ್ಕೆ ಬಂದಿದೆ. ಕುಮಾರಧಾರಾ ನದಿ ತಟದಲ್ಲಿಯೇ ಈ ಕ್ಷೇತ್ರವಿದೆ. ಇಲ್ಲಿನ ದೇವರ ಮೀನುಗಳಿಗೆ ಅಕ್ಕಿ ನೀಡುವ ಹರಕೆ ಹೊತ್ತರೆ, ಚರ್ಮದ ರೋಗಗಳು ವಾಸಿಯಾಗುತ್ತದೆ ಎನ್ನುವ ನಂಬಿಕೆಯೂ ಇದೆ. ಲಿಂಗ ಸ್ವರೂಪಿಯಾಗಿ ಇಲ್ಲಿ ಸುಬ್ರಹ್ಮಣ್ಯ ಸ್ವಾಮಿ ಮತ್ತು ಶಿವ ನೆಲೆಯಾಗಿದ್ದು, ಊರ- ಪರವೂರ ಭಕ್ತಾಧಿಗಳ ನೆರವಿನೊಂದಿಗೆ ಕ್ಷೇತ್ರದ ಬ್ರಹ್ಮಕಲಶೋತ್ಸವಕ್ಕೆ ಮುಂದಡಿ ಇಡಲಾಗಿದೆ. ಸುಮಾರು 1 ಕೋಟಿ ರೂಪಾಯಿ ವೆಚ್ಚದಲ್ಲಿ ಕ್ಷೇತ್ರದ ಪುನರುಜ್ಜೀವನ ಕೆಲಸ ನಡೆದಿದ್ದು, ಎಪ್ರಿಲ್ 5ರಿಂದ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಎಪ್ರಿಲ್ 10ಕ್ಕೆ ಬ್ರಹ್ಮಕಲಶ ನಡೆಯಲಿದೆ ಎಂದು ಅವರು ಮಾಹಿತಿ ನೀಡಿದರು.
Kshetra Samachara
31/03/2022 04:53 pm