ಉಡುಪಿ: ಶ್ರೀಕೃಷ್ಣಮಠದಲ್ಲಿ ತಕ್ಷಕ ಬಿಲದ ಸನ್ನಿಧಿ ಮುಂಭಾಗ ದ್ವೈವಾರ್ಷಿಕ ನಾಗಮಂಡಲೋತ್ಸವ ಭಕ್ತಿ- ಶ್ರದ್ಧೆಯಿಂದ ಸಂಪನ್ನಗೊಂಡಿತು.
ಪರ್ಯಾಯ ಅದಮಾರು ಮಠಾಧೀಶ ಶ್ರೀವಿಶ್ವಪ್ರಿಯತೀರ್ಥ ಶ್ರೀಪಾದರು, ಪರ್ಯಾಯ ಪೀಠಾಧೀಶ ಶ್ರೀಈಶಪ್ರಿಯತೀರ್ಥ ಶ್ರೀಪಾದರು, ಪಲಿಮಾರು ಮಠಾಧೀಶ ಶ್ರೀವಿದ್ಯಾಧೀಶತೀರ್ಥ ಶ್ರೀಪಾದರು, ಪಲಿಮಾರು ಕಿರಿಯ ಮಠಾಧೀಶ ಶ್ರೀವಿದ್ಯಾರಾಜೇಶ್ವರ ತೀರ್ಥ ಶ್ರೀಪಾದರ ಉಪಸ್ಥಿತಿಯಲ್ಲಿ ಹಾಲಿಟ್ಟು ಸೇವೆ ನಡೆದ ನಂತರ ವಿದ್ಯುದ್ದೀಪ ಇಲ್ಲದೆ ಸಾಂಪ್ರದಾಯಿಕ ಶೈಲಿಯಲ್ಲಿ, ನಾಗಕನ್ನಿಕೆಗೆ ನೈಸರ್ಗಿಕ ಬಣ್ಣ ಬಳಸಿದ ಉಡುಪಿ ಕೈಮಗ್ಗದ ಸೀರೆ ಧರಿಸಿ ನರ್ತಿಸಿದ ಮಂಡಲ ಸೇವೆ ನಡೆಯಿತು.
* ನಾಗಮಂಡಲ ವಿಶೇಷತೆ:
ಉಡುಪಿ ಶ್ರೀಕೃಷ್ಣಮಠದಲ್ಲಿ ನಾಗ ದೇವರೇ ಸಂಪತ್ತಿನ ರಕ್ಷಣೆ ಮಾಡುತ್ತಾರೆಂಬ ನಂಬಿಕೆಯಿದೆ. ಹೀಗಾಗಿ ಪ್ರತಿ ಮಠಾಧೀಶರೂ ತಮ್ಮ ಪರ್ಯಾಯ ಸಂದರ್ಭ ನಾಗದೇವರ ಸಂಪ್ರೀತಿಗಾಗಿ ನಾಗಮಂಡಲ ನಡೆಸುತ್ತಾರೆ. ನಿನ್ನೆ ರಾತ್ರಿ ಅದಮಾರು ಪರ್ಯಾಯ ಮಠದವರು ನಡೆಸಿದರು.
4 ಶತಮಾನಗಳ ಹಿಂದೆ ಭಾರಿ ಪ್ರಮಾಣದ ಸಂಪತ್ತು ಶ್ರೀ ಕೃಷ್ಣಮಠಕ್ಕೆ ಕೊಡುಗೆಯಾಗಿ ಸಿಕ್ಕಿತ್ತು. ಯತಿ ಸಾರ್ವಭೌಮ ಶ್ರೀ ವಾದಿರಾಜ ಸ್ವಾಮಿಗಳ ಪವಾಡಗಳಿಂದ ಬೆರಗಾದ ಮುಸ್ಲಿಂ ಅರಸ ಈ ಸಂಪತ್ತನ್ನು ದಾನ ಮಾಡಿದ್ದ. ದಾನವಾಗಿ ಬಂದ ಸಂಪತ್ತನ್ನು ಶ್ರೀ ಕೃಷ್ಣನ ಆಜ್ಞೆಯಂತೆ ವಾದಿರಾಜ ಸ್ವಾಮಿಗಳು ಭೂಮಿಯಡಿ ಹೂತು, ನಾಗ ದೇವರ ರಕ್ಷಣೆಯಲ್ಲಿ ಇರಿಸಿದ್ದಾರೆ ಎಂಬುದು ಪ್ರತೀತಿ.
ಶ್ರೀ ಕೃಷ್ಣಮಠದ ಹೊರ ಆವರಣದಲ್ಲಿ ಶ್ರೀ ಸುಬ್ರಹ್ಮಣ್ಯ ಗುಡಿಯಿದ್ದು, ಇದರಡಿಯೂ ಅಪಾರ ಪ್ರಮಾಣದ ಸಂಪತ್ತಿದೆ ಅನ್ನೋದು ಭಕ್ತರ ನಂಬಿಕೆ. ಇಲ್ಲಿ ಪ್ರತೀ 2 ವರ್ಷಕ್ಕೊಮ್ಮೆ ನಾಗಮಂಡಲ ನಡೆಯುತ್ತದೆ. ಹಳದಿ ಬಣ್ಣದ ಮಂಡಲ ಸುತ್ತಲೂ ನಾಗಪಾತ್ರಿ- ನಾಗಕನ್ನಿಕೆಯರಿಂದ ಮನಮೋಹಕ ನೃತ್ಯ ನಡೆಯುತ್ತದೆ.
Kshetra Samachara
01/01/2022 01:00 pm