ಉಡುಪಿ: ಶ್ರೀಕೃಷ್ಣಮಠದಲ್ಲಿ ಅಶ್ವಯುಜ ಮಾಸದ ಶುಕ್ಲ ಏಕಾದಶಿಯಿಂದ ಕಾರ್ತಿಕ ಮಾಸದ ಶುಕ್ಲ ಏಕಾದಶಿವರೆಗೆ ನಡೆಯುವ ಪಕ್ಷಿಮ ಜಾಗರ ಪೂಜೆ ಆರಂಭಗೊಂಡಿದೆ.
ಪರ್ಯಾಯ ಅದಮಾರು ಪೀಠಾಧೀಶ ಶ್ರೀಈಶಪ್ರಿಯ ತೀರ್ಥ ಶ್ರೀಪಾದರು ಪೂಜೆ ನೆರವೇರಿಸಿದರು.
ಆಷಾಢ ಶುದ್ಧ ಏಕಾದಶಿಯಿಂದ ಭಗವಂತ ಯೋಗನಿದ್ರೆಯಲ್ಲಿದ್ದಾನೆಂಬ ನಂಬಿಕೆ. ಈ ಒಂದು ತಿಂಗಳು ಅಪೂರ್ವ ವಾದ್ಯಘೋಷ, ಬಳಿಕ ಪಕ್ಷಿಮ ಜಾಗರ ಪೂಜೆ ನಡೆಯುತ್ತದೆ. ಯೋಗನಿದ್ರೆಯಿಂದ ಭಗವಂತನನ್ನು ಎಚ್ಚರಿಸಲು ಭಕ್ತರು ಮಾಡುವ ಸೇವೆ ಇದು.
ಕೃಷ್ಣನಿಗೆ ನಿತ್ಯ 14 ಬಗೆಯ ಪೂಜೆಗಳೊಂದಿಗೆ ಪಕ್ಷಿಮ ಜಾಗರ (ಜಾಗರಣೆ) ಪೂಜೆ ನಡೆಯುತ್ತದೆ. ಇನ್ನು ಒಂದು ತಿಂಗಳು ನಿತ್ಯ ಪಕ್ಷಿಮ ಜಾಗರ ಪೂಜೆ ನಡೆದು ಉತ್ಥಾನ ದ್ವಾದಶಿಯಂದು ಸಂಪನ್ನಗೊಳ್ಳಲಿದೆ.
ಬೆಳಗ್ಗೆ ನಿರ್ಮಾಲ್ಯ, ಉಷಃಕಾಲ, ಅಕ್ಷಯ ಪಾತ್ರೆ ಪೂಜೆ, ಪಂಚಾಮೃತ ಅಭಿಷೇಕ ಬಳಿಕ ಪಕ್ಷಿಮ ಜಾಗರ ಪೂಜೆ ನಡೆಯಲಿದೆ. ಈ ಸಂದರ್ಭ ಕೃಷ್ಣ ಮಠದಲ್ಲಿ ಗರ್ಭಗುಡಿ ಮುಂಭಾಗ ಮತ್ತು ಸುತ್ತಲಿನ ದಳಿಗಳಲ್ಲಿ ದೀಪಗಳನ್ನು ಹಚ್ಚಲಾಗುತ್ತದೆ, ವಿಶೇಷವಾದ ಸೂರ್ಯವಾದ್ಯ ಮೊಳಗಿಸಲಾಗುತ್ತದೆ. ಪರ್ಯಾಯ ಶ್ರೀಗಳು ಮೊದಲಿಗೆ ಕೃಷ್ಣನಿಗೆ ಕೂರ್ಮಾರತಿ ಮಾಡಿ, ಬಳಿಕ ಅನುಕ್ರಮವಾಗಿ ಮುಖ್ಯಪ್ರಾಣ ದೇವರಿಗೆ, ಮಧ್ವಾಚಾರ್ಯರಿಗೆ, ಗರುಡ ದೇವರಿಗೆ ಆರತಿ ಬೆಳಗುತ್ತಾರೆ.
Kshetra Samachara
18/10/2021 04:13 pm