ಬಂಟ್ವಾಳ: ಜಗತ್ತಿಗೆ ಮಹಾಮಾರಿಯಾಗಿ ಕಾಡಿದ ಕೊರೋನದಂತಹ ಸಂಕಷ್ಟಗಳನ್ನು ದೂರಗೊಳಿಸಿ ಜನತೆಗೆ ಬದುಕಿನಲ್ಲಿ ಸಮೃದ್ಧಿ ಕಾಣಲು ದೇವಿ ಆರಾಧನೆಯಿಂದ ಸಾಧ್ಯವಿದೆ ಎಂದು ಮಹರ್ಷಿವಾಣಿ ಖ್ಯಾತಿಯ ಡಾ. ಆನಂದ ಗುರೂಜಿ ಹೇಳಿದ್ದಾರೆ.
ತಾಲೂಕಿನ ರಾಯಿ ಸಮೀಪದ ಕೈತ್ರೋಡಿ ಕ್ವಾರ್ಟಸ್ ಶ್ರೀ ಮಂತ್ರದೇವತೆ,ಕೊರಗಜ್ಜ ಕ್ಷೇತ್ರದಲ್ಲಿ ಮಂಗಳವಾರ ನಡೆದ ಚಂಡಿಕಾಯಾಗಕ್ಕೆ ಪೂರ್ಣಾಹುತಿ ನೆರವೇರಿಸಿದ ಬಳಿಕ ಅವರು ಆಶೀರ್ವಚನ ನೀಡಿದರು. ಕೊರಗಜ್ಜ ದೈವ ಭಕ್ತರ ಸಂಕಷ್ಟ ಕಳೆಯಲು ಭಕ್ತಿಗೆ ತ್ವರಿತವಾಗಿ ಒಲಿಯುತ್ತಾನೆ ಎಂದರು.
ಕಟೀಲು ಕ್ಷೇತ್ರದ ವೇದಮೂರ್ತಿ ಕಮಲಾದೇವಿ ಅಸ್ರಣ್ಣ ಮಾತನಾಡಿ, ಚಂಡಿಕಾಯಾಗದಿಂದ ಸಮಸ್ತ ಭಕ್ತರಿಗೆ ಒಳಿತು ಉಂಟಾಗುತ್ತದೆ ಎಂದರು. ವೇದಮೂರ್ತಿ ಸುಬ್ರಹ್ಮಣ್ಯ ಪರಾಡ್ಕರ್ ಗುಂಡ್ಯಡ್ಕ ಮತ್ತು ರಾಧಾಕೃಷ್ಣ ಭಟ್ ಪೆದಮಲೆ ಮಾರ್ಗದರ್ಶನದಲ್ಲಿ ಚಂಡಿಕಾಯಾಗ ನೆರವೇರಿತು.
ಇದೇ ವೇಳೆ ಕೊರಗಜ್ಜ ಭಕ್ತಿಗೀತೆ ಹಾಡಿ ಗಮನ ಸೆಳೆದ ಬಾಲ ಪ್ರತಿಭೆ ಕಾರ್ತಿಕ್ ಕಾರ್ಕಳ ಮತ್ತು ಅಶ್ವಥ ಎಲೆಯಲ್ಲಿ ಚಿತ್ರ ರಚಿಸಿದ ತಿಲಕ್ ಕುಲಾಲ್ ಮೂಡಬಿದ್ರಿ, ಸಂಘಟಕ ಚಂದಪ್ಪ ಪೂಜಾರಿ ಇವರನ್ನು ಗುರೂಜಿ ಸನ್ಮಾನಿಸಿದರು.
ಕ್ಷೇತ್ರದ ಧರ್ಮದರ್ಶಿ ಲೋಕೇಶ್ ದಂಪತಿ ಮತ್ತಿತರರು ಇದ್ದರು. ಜಗದೀಶ ಕೊಯಿಲ ಸ್ವಾಗತಿಸಿ, ಪ್ರತೀಶ್ ಗೌರೀಶ್ ವಂದಿಸಿ ಕಾರ್ಯಕ್ರಮ ನಿರೂಪಿಸಿದರು.ಇದಕ್ಕು ಮುನ್ನ ಚೆಂಡೆ ವಾದ್ಯ, ಕಳಶ ಸಹಿತ ಆಕರ್ಷಕ ಮೆರವಣಿಗೆ ನಡೆಯಿತು.
Kshetra Samachara
16/12/2020 10:52 am