ಮಂಗಳೂರು: ದೇಶದ ಪ್ರಸಿದ್ಧ ಪುಣ್ಯಕ್ಷೇತ್ರಗಳಲ್ಲಿ ಕೇರಳದ ಶಬರಿಮಲೆಯೂ ಒಂದು. ಈಗಾಗಲೇ ಶಬರಿಮಲೆ ಸ್ವಾಮಿ ಶ್ರೀ ಅಯ್ಯಪ್ಪನ ದರ್ಶನಕ್ಕೆ ತೆರಳುವವರಿಗೆ ಒಂದಿಷ್ಟು ನಿರ್ಬಂಧ ಜೊತೆಗೆ ಅವಕಾಶ ಕಲ್ಪಿಸಲಾಗಿದೆ. ಆದರೆ, ಇನ್ನೂ ಕೊರೊನಾ ಆತಂಕದಲ್ಲಿ ಸ್ವಾಮಿ ಅಯ್ಯಪ್ಪನ ದರ್ಶನ ಮಾಡೋದು ಅಷ್ಟು ಸುಲಭದ ಮಾತಲ್ಲ. ಅದಕ್ಕೂ ಜಾಸ್ತಿ ಕೇರಳ ಸರಕಾರ ವಿಧಿಸಿರುವ ನಿರ್ಬಂಧ ಗಡಿ ದಾಟಿ ಸ್ವಾಮಿ ಅಯ್ಯಪ್ಪನ ದರ್ಶನ ಪಡೆಯುವುದು ಕಷ್ಟಕರವಾಗಿಸಿದೆ. ಹಾಗಂತ ಸ್ವಾಮಿ ಅಯ್ಯಪ್ಪನ ಭಕ್ತರು ಅಯ್ಯಪ್ಪನ ಪ್ರಸಾದದ ಬಗ್ಗೆ ತಲೆ ಕೆಡಿಸಬೇಕಿಲ್ಲ. ಭಕ್ತರು ಮನಸ್ಸು ಮಾಡಿದ್ರೆ ಮನೆ ಬಾಗಿಲಿಗೇ ಇನ್ಮುಂದೆ ಶಬರಿಮಲೆ ಅಯ್ಯಪ್ಪನ ಪ್ರಸಾದ ಬರಲಿದೆ. ಅಂತಹದ್ದೊಂದು ಅವಕಾಶವನ್ನು ಭಾರತೀಯ ಅಂಚೆ ಇಲಾಖೆ ಒದಗಿಸಿಕೊಡಲಿದೆ.
ಭಾರತೀಯ ಅಂಚೆ ಇಲಾಖೆ ಕೇರಳ ಹಾಗೂ ಶಬರಿಮಲೆ ದೇವಸ್ಥಾನ ಆಡಳಿತ ಮಂಡಳಿ ಇಂತಹದ್ದೊಂದು ಕರಾರು ಮಾಡಿಕೊಂಡಿದೆ. ಅದರಂತೆ 'ಸ್ಪೀಡ್ ಪೋಸ್ಟ್' ಮೂಲಕ ಪ್ರಸಾದವನ್ನು ಭಕ್ತರ ಮನೆ ಬಾಗಿಲಿಗೆ ತಲುಪಿಸುವ ವ್ಯವಸ್ಥೆ ಆಗಲಿದೆ. ಅದಕ್ಕಾಗಿ ಭಕ್ತರು ಮಾಡಬೇಕಿರುವುದು ಇಷ್ಟೇ; ತಮ್ಮ ಸಮೀಪದ ಅಂಚೆ ಕಚೇರಿಗೆ ತೆರಳಿ ಪ್ರಸಾದ ಸ್ವೀಕರಿಸಲು ಬೇಕಾದ 'ಆರ್ಡರ್ ಫಾರಂ' ತುಂಬಿಸಿ ತಮಗೆ ಬೇಕಾದ ಪ್ರಸಾದದ ಪ್ರಮಾಣ ಅಲ್ಲಿ ಸಲ್ಲಿಸಬೇಕು. ಒಂದು 'ಆರ್ಡರ್ ಫಾರಂ'ನಲ್ಲಿ ಹತ್ತು ಪ್ಯಾಕೆಟ್ ಪ್ರಸಾದ ತಲಾ 450 ರೂ. ನಂತೆ ಸಲ್ಲಿಸಿ ತರಿಸಿಕೊಳ್ಳಬಹುದು. ಅದಕ್ಕೂ ಹೆಚ್ಚಿನ ಸಂಖ್ಯೆಯಲ್ಲಿ ಪ್ರಸಾದ ತರಿಸಿಕೊಳ್ಳಲು ಇನ್ನೊಂದು 'ಆರ್ಡರ್ ಫಾರಂ' ತುಂಬಬೇಕು. ಪ್ರಸಾದದ ಕಿಟ್ ನಲ್ಲಿ ಅರವಣ, ತುಪ್ಪ, ಕುಂಕುಮ, ಅರಿಶಿಣ, ವಿಭೂತಿ ಮತ್ತು ಅರ್ಚನೆ ಪ್ರಸಾದ ಇರಲಿದೆ ಎಂದು ಮಂಗಳೂರಿನ ಹಿರಿಯ ಅಂಚೆ ಅಧೀಕ್ಷಕ ಶ್ರೀಹರ್ಷ ತಿಳಿಸಿದ್ದಾರೆ.
ಒಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲೂ ಸಹಸ್ರಾರು ಸಂಖ್ಯೆಯಲ್ಲಿ ಸ್ವಾಮಿ ಅಯ್ಯಪ್ಪನ ಭಕ್ತರಿದ್ದು, ಅವರೆಲ್ಲರಿಗೂ ಶಬರಿಮಲೆಗೆ ತೆರಳಲು ಸಾಧ್ಯವಾಗುವುದಿಲ್ಲ. ಅದರಲ್ಲೂ ಕೊರೊನಾದ ಈ ಸಂದರ್ಭ ಸರಕಾರದ ನಿರ್ಬಂಧ ಕಂಡು ಅದೆಷ್ಟೋ ಭಕ್ತರು ಈ ಬಾರಿ ಮಾಲಾಧಾರಣೆ ಮಾಡದೆ ದೂರವುಳಿದಿದ್ದಾರೆ. ಇಂತಹ ಸಹಸ್ರ ಭಕ್ತರ ಪಾಲಿಗೆ ಇದು ಶುಭ ಸುದ್ದಿಯೇ ಸರಿ.
Kshetra Samachara
19/11/2020 10:37 pm