ರೋಗಿಗಳಂತೆ ನಟಿಸಲು ಉತ್ತರ ಕರ್ನಾಟಕ ಮೂಲದ 100 ಕೂಲಿ ಕಾರ್ಮಿಕರಿಗೆ ಹೇಳಿ, ಕೆಲಸ ಮುಗಿದ ಮೇಲೆ ಹಣ ಕೊಡದೆ ಸತಾಯಿಸುತ್ತಿರುವ ಪ್ರಕರಣವೊಂದು ಉಳ್ಳಾಲದಲ್ಲಿ ನಡೆದಿದೆ. ಸಂತ್ರಸ್ತರು ನ್ಯಾಯಕ್ಕಾಗಿ ಪೊಲೀಸ್ ಠಾಣೆ ಮೆಟ್ಟಿಲು ಏರಿದ್ದಾರೆ.
ಮಂಗಳೂರಿನ ಕಾವೂರಿನಲ್ಲಿ ಬಿಡಾರ ಹೂಡಿರುವ ಉತ್ತರ ಕರ್ನಾಟಕ ಮೂಲದ 100 ಮಂದಿ ಕೂಲಿ ಕಾರ್ಮಿಕರು ದೇರಳಕಟ್ಟೆಯ ಕಣಚೂರು ಆಸ್ಪತ್ರೆ ವಿರುದ್ಧ ವಂಚನೆಯ ಆರೋಪ ಮಾಡಿದ್ದಾರೆ. ಪ್ರಸಾದ್ ಎಂಬ ವ್ಯಕ್ತಿ ಕಣಚೂರು ಆಸ್ಪತ್ರೆಯಲ್ಲಿ ಇನ್ಸ್‌ಪೆಕ್ಷನ್ ಸಂದರ್ಭ ರೋಗಿಗಳೆಂದು ಮಲಗಲು ನೂರು ಮಂದಿ ಕೂಲಿ ಕಾರ್ಮಿಕರನ್ನ ಕರೆಸಿಕೊಂಡಿದ್ದನಂತೆ. ಆತನ ಸೂಚನೆಯಂತೆ ಕಾವೂರಲ್ಲಿ ಬಿಡಾರ ಹೂಡಿದ್ದ 100 ಮಂದಿ ಕೂಲಿ ಕಾರ್ಮಿಕರನ್ನ ಲಕ್ಷ್ಮಿ ಮತ್ತು ಬಸವರಾಜ್ ಅವರು ಆ.1ರಂದು ಕಣಚೂರು ಆಸ್ಪತ್ರೆಯಲ್ಲಿ ರೋಗಿಗಳೆಂದು ಮಲಗಲು ಹೇಳಿದ್ದರು ಎನ್ನಲಾಗಿದೆ.
ದಿವಕ್ಕೆ 900 ರೂ. ಸಿಗುತ್ತದೆಂದು 100 ಜನ ಕೂಲಿ ಕಾರ್ಮಿಕರು ಆಗಸ್ಟ್ ಒಂದರಿಂದ 12 ದಿನಗಳ ಕಾಲ ಆಸ್ಪತ್ರೆಯಲ್ಲಿ ರೋಗಿಗಳಂತೆ ಮಲಗಿದ್ದಾಗಿ ಗುಲ್ಬರ್ಗ ಮೂಲದ ಮಲ್ಲಮ್ಮ ಹೇಳಿದ್ದಾರೆ. ಆಸ್ಪತ್ರೆಯಲ್ಲಿ 12 ದಿನ ಮಲಗಿದ್ದು ನಂತರ ಆಸ್ಪತ್ರೆ ಸಿಬ್ಬಂದಿ ನಮ್ಮನ್ನ ಹೊರ ಕಳಿಸಿದ್ದು, ಮಧ್ಯವರ್ತಿ ಪ್ರಸಾದ್ ಎಂಬಾತ 100 ಜನರಿಗೆ 4 ಲಕ್ಷ ನೀಡಿ ಬಾಕಿ ಉಳಿದ 5 ಲಕ್ಷ ರೂ.ವನ್ನ ಆಗಸ್ಟ್ 31ರಂದು ನೀಡೋದಾಗಿ ಹೇಳಿದ್ದ. ಅದರಂತೆ ನಿನ್ನೆ ಕೂಲಿ ಕಾರ್ಮಿಕರು ಬಾಕಿ ಉಳಿದ 5 ಲಕ್ಷ ಹಣವನ್ನ ಕೇಳಲು ಕಣಚೂರು ಆಸ್ಪತ್ರೆಗೆ ತೆರಳಿದಾಗ ಎಲ್ಲರನ್ನೂ ಹೊರದಬ್ಬಿ ಗೇಟ್ ಹಾಕಿದ್ದಾರೆ ಎಂದು ಕಾರ್ಮಿಕರು ಅಳಲು ತೋಡಿಕೊಂಡಿದ್ದಾರೆ.
ಸಂತ್ರಸ್ತರು ದಿಕ್ಕು ಕಾಣದೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಜಮಾಯಿಸಿ ನ್ಯಾಯ ಯಾಚಿಸಿದ್ದಾರೆ. ಠಾಣೆಯ ಪಿಎಸ್‌ಐಯೊಬ್ಬರು ಮಾನವೀಯತೆ ತೋರದೆ ಹೀನಾಯ ರೀತಿಯಲ್ಲಿ ಕಾರ್ಮಿಕರನ್ನ ದಬಾಯಿಸಿದ್ದಾರೆ. ಸಮಾಜ ಸೇವಕ ರಿಯಾಝ್ ಎಂಬವರು ಕಾರ್ಮಿಕರಿಗೆ ರಾತ್ರಿ ಊಟ ಮತ್ತು ಉಳಿಯಲು ವ್ಯವಸ್ಥೆ ಮಾಡಿದ್ದಾರೆ.
ಕಣಚೂರು ಆಸ್ಪತ್ರೆ ಮೂಲಗಳು ಕೂಲಿ ಕಾರ್ಮಿಕರ ಎಲ್ಲ ಆರೋಪಗಳನ್ನ ತಳ್ಳಿ ಹಾಕಿದ್ದು ಇದೆಲ್ಲ ಬ್ಲಾಕ್ ಮೇಲ್ ಅಂತ ಹೇಳಿ ಕೈ ತೊಳೆದುಕೊಂಡಿದೆ.
ಖಾಸಗಿ ಆಸ್ಪತ್ರೆಗಳು ತಮ್ಮಲ್ಲಿ ನೂರಾರು ರೋಗಿಗಳು ಇದ್ದಾರೆಂದು ತೋರಿಸಲು ಉತ್ತರ ಕರ್ನಾಟಕದ ಕೂಲಿ ಕಾರ್ಮಿಕರನ್ನು ರೋಗಿಗಳಂತೆ ಮಲಗಿಸುವುದು ಮಂಗಳೂರಿನಲ್ಲಿ ಮಾಮೂಲಿ ಎನ್ನುವಂತಾಗಿದೆ.
PublicNext
01/09/2022 01:38 pm