ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಾರ್ಕಳ: ಮಾಳ ಗ್ರಾ.ಪಂ ಅಧ್ಯಕ್ಷರ ಚುನಾವಣಾಧಿಕಾರಿಯಾಗಿ ಈಶ್ವರ್ ನಾಯ್ಕ್ ನೇಮಕ

ಕಾರ್ಕಳ: ಬಿಜೆಪಿ ಬೆಂಬಲಿತ ಸದಸ್ಯರೊಳಗಿನ ಬಣ ಬಡಿದಾಟಕ್ಕೆ ಮಾಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಲ್ಲಿಕಾ ಶೆಟ್ಟಿ ತಲೆದಂಡವಾದ ಬಳಿಕ ಇದೀಗ ತೆರವಾದ ಅಧ್ಯಕ್ಷ ಸ್ಥಾನಕ್ಕಾಗಿ ಚುನಾವಣೆ ನಡೆಯಬೇಕಿದ್ದ ಹಿನ್ನಲೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾರಾವ್ ಅವರು ಚುನಾವಣಾಧಿಕಾರಿಯಾಗಿ ಕಾರ್ಕಳ ಪುರಸಭೆಯ ಸಮುದಾಯ ಸಂಘಟನಾಧಿಕಾರಿ ಈಶ್ವರ ನಾಯ್ಕ್ ಅವರನ್ನು ನೇಮಿಸಿ ಆದೇಶ ಹೊರಡಿಸಿದ್ದಾರೆ.

ಚುನಾವಣಾಧಿಕಾರಿ ನೇಮಕವಾದ ಹಿನ್ನಲೆಯಲ್ಲಿ ಮಾಳ ಗ್ರಾಮ ಪಂಚಾಯಿತಿ ರಾಜಕೀಯದಲ್ಲಿ ಮತ್ತೆ ಚಟುವಟಿಕೆಗಳು ಗರಿಗೆದರಿದ್ದು, ಮುಂದಿನ ಅಧ್ಯಕ್ಷರು ಯಾರು ಎನ್ನುವ ಕುತೂಹಲ ಮೂಡಿದೆ. ಒಟ್ಟು 15 ಸದಸ್ಯ ಬಲದಲ್ಲಿ 8 ಮಹಿಳೆಯರು ಹಾಗೂ 7 ಪುರುಷ ಸದಸ್ಯರಿದ್ದಾರೆ.

ಯಾರಿಗೆ ಒಲಿಯಲಿದೆ ಅಧ್ಯಕ್ಷ ಪಟ್ಟ?

ಬಿಜೆಪಿಯ ಬಣಜಗಳದಿಂದ ಅಧ್ಯಕ್ಷ ಸ್ಥಾನದಿಂದ ಪದಚ್ಯುತಿಗೊಂಡ ಮಲ್ಲಿಕಾ ಶೆಟ್ಟಿಯವರಿಗೆ ಒಟ್ಟು ಐವರು ಸದಸ್ಯರು ಬೆಂಬಲವಿದೆ ಎನ್ನಲಾಗಿದ್ದು ಈ ಪೈಕಿ ನಾಲ್ವರು ಮಹಿಳೆಯರು ಮಲ್ಲಿಕಾ ಶೆಟ್ಟಿ ಪರವಾಗಿ ಇದ್ದಾರೆ ಎನ್ನಲಾಗಿದೆ. ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯದ ಪರವಾಗಿ ಮತ ಚಲಾಯಿಸಿದ ನಾಲ್ವರು ಮಹಿಳೆಯರ ಪೈಕಿ ಒಬ್ಬರು ಅಧ್ಯಕ್ಷೆಯಾಗುವ ಸಾಧ್ಯತೆ ದಟ್ಟವಾಗಿದೆ ಎನ್ನುವ ಮಾತುಗಳು ರಾಜಕೀಯ ವಲಯದಲ್ಲಿ ಕೇಳಿಬರುತ್ತಿದೆ.

ಒಟ್ಟು 8 ಜನ ಮಹಿಳಾ ಸದಸ್ಯರ ಪೈಕಿ 5ನೇ ವಾರ್ಡಿನ ರಕ್ಷಿತಾ ಶೆಟ್ಟಿಯವರ ಹೆಸರು ಅಧ್ಯಕ್ಷ ಸ್ಥಾನಕ್ಕೆ ಪ್ರಬಲವಾಗಿ ಕೇಳಿಬರುತ್ತಿದ್ದು, ಇನ್ನುಳಿದಂತೆ ಮೂರು ಅವಧಿಗೆ ಸದಸ್ಯೆಯಾಗಿ 4ನೇ ವಾರ್ಡಿನಿಂದ ಆಯ್ಕೆಯಾದ ವಿಮಲಾ ಪೂಜಾರಿಯವರ ಹೆಸರು ಕೂಡ ಕೇಳಿ ಬರುತ್ತಿದೆ.ಇದರ ಜತೆಗೆ 6 ನೇ ವಾರ್ಡಿನ ಸದಸ್ಯೆ ಶಶಿಕಲಾ ಪೂಜಾರಿ ಹಾಗೂ 3ನೇ ವಾರ್ಡಿನ ನೀಲು ಮೇರ ಅವರ ಹೆಸರನ್ನು ಅಂತಿಮಗೊಳಿಸಿದರೂ ಅಚ್ಚರಿಯಿಲ್ಲ.

15 ಸದಸ್ಯ ಬಲದ ಮಾಳ ಗ್ರಾಮ ಪಂಚಾಯಿತಿಯಲ್ಲಿ ಸದಸ್ಯರ ನಿಲುವಿಗೆ ವಿರುದ್ಧವಾಗಿ ವರ್ತಿಸುತ್ತಿದ್ದಾರೆ ಎನ್ನುವ ಆರೋಪದ ಹಿನ್ನಲೆಯಲ್ಲಿ ಮಲ್ಲಿಕಾ ಶೆಟ್ಟಿಯವರನ್ನು ಅವಿಶ್ವಾಸ ನಿರ್ಣಯದ ಮೂಲಕ ವಜಾಗೊಳಿಸಿದ್ದರು. ಆದರೆ ತಾನು ಭ್ರಷ್ಟಾಚಾರಕ್ಕೆ ಅವಕಾಶ ನೀಡಿಲ್ಲ ಎನ್ನುವ ಕಾರಣಕ್ಕಾಗಿ ನನ್ನ ವಿರುದ್ಧ ಷಡ್ಯಂತ್ರ ನಡೆಸಲಾಗಿದೆ ಇದಕ್ಕೆ ಬಿಜೆಪಿ ನಾಯಕರು ಕೈಜೋಡಿಸಿದ್ದಾರೆ ಎಂದು ಮಲ್ಲಿಕಾ ಶೆಟ್ಟಿ ಆರೋಪಿಸಿದ್ದರು.

ಅಧ್ಯಕ್ಷೀಯ ಚುನಾವಣೆಗೆ ವೇದಿಕೆ ಸಿದ್ದವಾಗಿರುವ ಹಿನ್ನಲೆಯಲ್ಲಿ ಮಾಳ ಗ್ರಾಮ ಪಂಚಾಯಿಯಲ್ಲಿ ಮತ್ತೆ ರಾಜಕೀಯ ಜಂಗಿಕುಸ್ತಿಗೆ ಅಖಾಡ ಸಿದ್ದವಾಗಿದ್ದು, ಯಾರ ಕೈ ಮೇಲಾಗಲಿದೆ ಎಂದು ಕಾದುನೋಡಬೇಕಿದೆ.

Edited By : Abhishek Kamoji
Kshetra Samachara

Kshetra Samachara

07/09/2022 04:29 pm

Cinque Terre

2.23 K

Cinque Terre

0

ಸಂಬಂಧಿತ ಸುದ್ದಿ