ಮಂಗಳೂರು: ಪ್ರಧಾನಿ ಕಾರ್ಯಕ್ರಮದ ಯಶಸ್ವಿಗೆ ಜಿಲ್ಲಾಡಳಿತ ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದೆ. ತುಂಬಾ ಸಂತೋಷ. ಆದರೆ, ಈ ಯೋಜನೆಗಳ ಅನುಷ್ಠಾನಕ್ಕೆ ರಾಜ್ಯ ಮತ್ತು ಕೇಂದ್ರ ಸರಕಾರದ ಅನುದಾನ ಎಷ್ಟೆಷ್ಟಿದೆ ಎಂಬುದು ಸಾರ್ವಜನಿಕರಿಗೆ ತಿಳಿಯಬೇಕಾಗಿದೆ ಎಂದು ಶಾಸಕ ಯುಟಿ ಖಾದರ್ ಹೇಳಿದ್ದಾರೆ.
ಮಂಗಳೂರಿನ ಮಲ್ಲಿಕಟ್ಟೆಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರಧಾನಿಯ ಮಂಗಳೂರು ಭೇಟಿಗೆ ಸ್ವಾಗತವಿದೆ. ಆದರೆ ಅದು ಕೇವಲ ಒಂದು ಕಾರ್ಯಕ್ರಮ ಆಗಬಾರದು. ಜಿಲ್ಲೆಯ ಅಭಿವೃದ್ಧಿಗಾಗಿ ಹಲವು ಬೇಡಿಕೆಗಳ ಪಟ್ಟಿಯೇ ಇದೆ. ಮುಖ್ಯವಾಗಿ ತುಳು ಭಾಷೆಯನ್ನು 8ನೆ ಪರಿಚ್ಛೇಧಕ್ಕೆ ಸೇರಿಸಬೇಕು, ತುಳುವನ್ನು ರಾಜ್ಯಭಾಷೆ ಎಂದು ಘೋಷಿಸಬೇಕು.
ಹೊಸ ಯೋಜನೆಗಳಲ್ಲಿ ಖಾಸಗಿ ಕಂಪೆನಿಗಳ ಮೊತ್ತಗಳ ಬಗ್ಗೆ ಮಾಹಿತಿಯನ್ನು ಪ್ರಕಟಿಸಬೇಕು. ಇನ್ನು ಹೆದ್ದಾರಿಯ ಅನಧಿಕೃತ ಟೋಲ್‌ಗೇಟ್ ತೆರವುಗೊಳಿಸಬೇಕು. ಎಂಆರ್‌ಪಿಎಲ್, ರೈಲ್ವೆ, ಬ್ಯಾಂಕಿಂಗ್‌ನಲ್ಲಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಬೇಕು. 2018ರ ಚುನಾವಣೆಯ ಬಿಜೆಪಿ ಪ್ರಣಾಳಿಕೆಯಲ್ಲಿ ಘೋಷಿಸಿದಂತೆ ಮಂಗಳೂರಿನಲ್ಲಿ ಎನ್‌ಐಎ ಕಚೇರಿ ಸ್ಥಾಪಿಸಬೇಕು.
ಇಂತಹ ಬೇಡಿಕೆಗಳನ್ನು ಪ್ರಧಾನಿಯ ಮುಂದಿಡುವ ಕೆಲಸವನ್ನು ಸಂಸದರು, ಶಾಸಕರು ಮಾಡಬೇಕು. ಅಲ್ಲದೇ ಈ ಬೇಡಿಕೆಗಳನ್ನು ಈಡೇರಿಸುವುದರೊಂದಿಗೆ ಸಮಸ್ಯೆಗಳಿಗೆ ಮುಕ್ತಿ ಕಾಣಿಸಲಿ ಎಂದರು. ಒಬ್ಬ ಶಾಸಕನ ನೆಲೆಯಲ್ಲಿ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ನನಗೆ ಇನ್ನೂ ಅಧಿಕೃತ ಆಹ್ವಾನ ಬಂದಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
Kshetra Samachara
31/08/2022 06:42 pm