ಉಡುಪಿ: ದೇಶದ ಸ್ವಾತಂತ್ರ್ಯಕ್ಕೆ ನಾವೇ ಕಾರಣ ಎಂದು ಕಾಂಗ್ರೆಸ್ಸಿಗರು ಪೋಸು ಕೊಡುತ್ತಾರೆ.ಆರ್ ಎಸ್ ಎಸ್ ಗೆ ರಾಷ್ಟ್ರಧ್ವಜ ಡಿಪಿ ಹಾಕಲು ಚಾಲೆಂಜ್ ಮಾಡುತ್ತಾರೆ. ಆದರೆ ಆರ್ ಎಸ್ ಎಸ್ ನ ಮೈ ಮನಸ್ಸುಗಳಲ್ಲಿ ರಾಷ್ಟ್ರಪ್ರೇಮವಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಡುಪಿಯಲ್ಲಿ ಮಾಧ್ಯಮದ ಜೊತೆ ಮಾತಾಡಿದ ಸಚಿವರು, ಅಜ್ಜ ನೆಟ್ಟ ಆಲದ ಮರಕ್ಕೆ ಕಾಂಗ್ರೆಸ್ ನಾಯಕರು ನೇತು ಹಾಕಿಕೊಂಡಿದ್ದಾರೆ. ಇಂತಹ ಕಾಂಗ್ರೆಸ್, ಆರ್ ಎಸ್ ಎಸ್ ಮತ್ತು ಬಿಜೆಪಿಗೆ ಬುದ್ಧಿ ಹೇಳುತ್ತದೆ. ಆರ್ ಎಸ್ ಎಸ್ ಮೇಲೆ ಕಾಂಗ್ರೆಸ್ ಕಾನೂನಾತ್ಮಕ ಕ್ರಮ ಕೈಗೊಂಡು ವಿಫಲವಾಗಿದೆ.
ಆರ್ ಎಸ್ ಎಸ್ ಇರುವುದೇ ಈ ರಾಷ್ಟ್ರದ ರಕ್ಷಣೆಗಾಗಿ, ಉಳಿವಿಗಾಗಿ. ದೇಶಭಕ್ತಿ ಪ್ರೇರೇಪಿಸುವುದೇ ಆರ್‌ಎಸ್‌ಎಸ್ ಉದ್ದೇಶ. ಆರ್ ಎಸ್ ಎಸ್ ಗೆ ಕಾಂಗ್ರೆಸ್ ರಾಷ್ಟ್ರಭಕ್ತಿ ಕಲಿಸುವ ಅಗತ್ಯವಿಲ್ಲ. ಚೀನಾ ಪಾಕಿಸ್ತಾನ ಜೊತೆ ಕೈಜೋಡಿಸಿದವರು ನಮಗೆ ಪಾಠ ಕಲಿಸುವ ಅಗತ್ಯವಿಲ್ಲ. ಇಟಲಿ ಯುರೋಪಿಗೆ ಹೋಗಿ ಭಾರತವನ್ನು ಅವಹೇಳನ ಭಾಷಣ ಮಾಡಿದವರಿಂದ ನಾವು ರಾಷ್ಟ್ರಭಕ್ತಿ ಕಲಿಯಬೇಕಾಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಇನ್ನು ತಿರಂಗಕ್ಕಾಗಿ ಲಕ್ಷಾಂತರ ಜನ ಪ್ರಾಣ ತೆತ್ತಿದ್ದಾರೆ ಎಂದ ಸಚಿವೆ, ಕೆಂಪುಕೋಟೆಯ ಮೇಲೆ ಧ್ವಜ ಹಾರಲು ಹಲವಾರು ಪ್ರಾಣ ತ್ಯಾಗಗಳಾಗಿವೆ. ಹಾಗಾಗಿ ಪ್ರತಿ ಮನೆ ಪ್ರತಿ ಮನದಲ್ಲೂ ತ್ರಿವರ್ಣ ಧ್ವಜ ಹಾರಬೇಕು.ತ್ರಿವರ್ಣ ಧ್ವಜ ಒಂದು ಧರ್ಮದ ಸಂಕೇತವಲ್ಲ, ತ್ರಿವರ್ಣ ಧ್ವಜ ಹಾರಿಸಲು ಇದ್ದ ನಿಬಂಧನೆಗಳನ್ನು ಮೂರು ದಿನ ತೆಗೆದುಹಾಕಲಾಗಿದೆ ಎಂದು ಉಡುಪಿಯಲ್ಲಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
PublicNext
13/08/2022 01:29 pm