ಮುಲ್ಕಿ: ಪಕ್ಷಿಕೆರೆ ಸಮೀಪದ ಕೆಮ್ರಾಲ್ ಗ್ರಾಮ ಪಂಚಾಯತ್ ನ ಪಂಜದ ಉಲ್ಯ ಭಾಗಕ್ಕೆ ನೆರೆ ಹಾನಿ ವೀಕ್ಷಣೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಬರಬೇಕಾಗಿದ್ದು ಕೊನೆಯ ಕ್ಷಣದಲ್ಲಿ ರದ್ದಾಗಿದೆ.ಸಿ.ಎಂ ಆಗಮನಕ್ಕೆ ಲಕ್ಷಗಟ್ಟಲೆ ಖರ್ಚು ಮಾಡಿ ಆಗಮನಕ್ಕಾಗಿ ನೆರೆ ಆವೃತವಾಗಿ ದಾರಿದೀಪ ಇಲ್ಲದೆ ಇದ್ದ ಪಂಜದ ಉಲ್ಯ ಭಾಗದಲ್ಲಿ ಲೈಟ್ ಅಳವಡಿಸಲಾಗಿದ್ದು, ಕೆಸರುಮಯವಾದ ರಸ್ತೆ ಇಕ್ಕೆಲಗಳಲ್ಲಿ ಜಲ್ಲಿ ಹುಡಿ ಹಾಕಲಾಗಿತ್ತು.
ಹಳೆಯಂಗಡಿಯಿಂದ ಉಲ್ಯದ ತನಕ ಅಲ್ಲಲ್ಲಿ ಪೊಲೀಸ್ ಹಾಗೂ ಭದ್ರತಾ ಸಿಂಬಂದಿ ಬೆಳಗಿನಿಂದಲೇ ನಿಯೋಜಿಸಲಾಗಿದ್ದು, ಭಾರೀ ಮಳೆ ನಡುವೆಯೂ ಅಧಿಕಾರಿಗಳ ತಂಡ ಮಧ್ಯಾಹ್ನದಿಂದಲೇ ಸ್ಥಳದಲ್ಲಿ ಬೀಡುಬಿಟ್ಟಿತ್ತು, ಶಾಸಕ ಉಮಾನಾಥ ಕೋಟ್ಯಾನ್ ಸ್ಥಳಕ್ಕೆ ಭೇಟಿ ನೀಡಿ ಈ ಎಲ್ಲಾ ವ್ಯವಸ್ಥೆಗಳನ್ನು ವೀಕ್ಷಿಸಿ ಮಾರ್ಗದರ್ಶನ ನೀಡಿದ್ದರು.
ಆದರೆ ಸಿಎಂ ಕೊನೆ ಕ್ಷಣದಲ್ಲಿ ಕೈಕೊಟ್ಟು ಸ್ಥಳೀಯ ನೆರೆಪೀಡಿತರನ್ನು ನಿರಾಸೆ ಮಾಡಿದ್ದಾರೆ. ತಡೆಗೋಡೆ ಸಹಿತ ದಾರಿದೀಪ ಅನೇಕ ಬೇಡಿಕೆಗಳನ್ನು ಸಿಎಂ ಜೊತೆ ಹೇಳಿಕೊಳ್ಳಲು ಬಂದಿದ್ದ ಗ್ರಾಮಸ್ಥರು ಹಿಡಿ ಶಾಪ ಹಾಕಿಕೊಂಡು ಮನೆಗೆ ತೆರಳಿದ್ದಾರೆ.
ಈ ಬಗ್ಗೆ ಶಾಸಕ ಉಮಾನಾಥ ಕೋಟ್ಯಾನ್ ಸ್ಪಷ್ಟನೆ ನೀಡಿ ಸಮಯದ ಅಭಾವದಿಂದ ಮುಖ್ಯಮಂತ್ರಿಯವರಿಗೆ ಪಂಜ ಭಾಗಕ್ಕೆ ಆಗಮಿಸಲು ಸಾಧ್ಯವಾಗಿಲ್ಲ, ಬುಧವಾರ ಬೆಂಗಳೂರಿಗೆ ನಿರ್ಗಮಿಸುವ ಸಂದರ್ಭ ಅಧಿಕಾರಿಗಳ ಜೊತೆ ಮುಖ್ಯಮಂತ್ರಿಯವರನ್ನು ಭೇಟಿಯಾಗಿ, ಪಂಜ, ಉಲ್ಯ, ಕಿಲೆಂಜೂರು ಮತ್ತಿತರ ನೆರೆ ಆವೃತವಾದ ಪ್ರದೇಶಗಳ ಅಭಿವೃದ್ಧಿಯ ಬಗ್ಗೆ ಬೇಡಿಕೆ ನೀಡಲಾಗುವುದು ಎಂದರು.
Kshetra Samachara
12/07/2022 10:44 pm