ಕಾರ್ಕಳ: ಪಂಚಾಯತ್ ಅಭಿವೃದ್ಧಿ ಅಧಿಕಾರಿ ನೇಮಕವಾಗದೆ ಅಭಿವೃದ್ಧಿ ಕುಂಠಿತವಾಗಿದೆ. ಇಂಧನ ಸಚಿವರ ಸ್ವಕ್ಷೇತ್ರದಲ್ಲೇ ಅಧಿಕಾರಿಗಳಿಲ್ಲದೆ ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. ಅದಕ್ಕಾಗಿ ಕೂಡಲೇ ಪಂಚಾಯತ್ ಅಭಿವೃದ್ಧಿ ಅಧಿಕಾರಿಯನ್ನು ನೇಮಿಸಬೇಕೆಂದು ಆಗ್ರಹಿಸಿ ಆಡಳಿತಾರೂಢ ಕಾಂಗ್ರೆಸ್ ಪಕ್ಷದ ಈದು ಗ್ರಾಮ ಪಂಚಾಯತ್ ಸದಸ್ಯರು ಪ್ರತಿಭಟನೆ ನಡೆಸಿದರು.
ಈ ಸಂದರ್ಭ ಮಾತನಾಡಿದ ಪಂಚಾಯತ್ ಉಪಾಧ್ಯಕ್ಷ ವಿಜಯಕುಮಾರ್ ಜೈನ್, ಕಾರ್ಕಳ ತಾಲೂಕಿನ ಈದು ಗ್ರಾಮ ಪಂಚಾಯತ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಸದಸ್ಯರ ಆಡಳಿತವಿದ್ದು ಕಳೆದ ಐದು ತಿಂಗಳಿಂದ ಪಿಡಿಒ ಆಗಲಿ, ಸೆಕ್ರೆಟರಿಯಾಗಲಿ ಇರುವುದಿಲ್ಲ. ಇದರಿಂದಾಗಿ ಅಭಿವೃದ್ಧಿ ಕಾರ್ಯ ಆಗುತ್ತಿಲ್ಲ. ಫೆಬ್ರವರಿಯಲ್ಲಿ ನಡೆಯುವ ಗ್ರಾಮ ಸಭೆ ನಡೆಯಲಿಲ್ಲ. ಸಾರ್ವಜನಿಕರು ತಮ್ಮ ಕೆಲಸಗಳಿಗೆ ಪದೇಪದೇ ಗ್ರಾಮ ಪಂಚಾಯತ್ ಕಾರ್ಯಾಲಯಕ್ಕೆ ಬಂದು ಬಂದು ಬೇಸರದಿಂದ ವಾಪಸಾಗುವ ದೃಶ್ಯ ಸಾಮಾನ್ಯವಾಗಿದೆ. ತಾಲೂಕು ಪಂಚಾಯತ್ ಇ.ಒ ಅವರಲ್ಲಿ ಹಲವಾರು ಬಾರಿ ಈ ಬಗ್ಗೆ ಮಾಹಿತಿ ನೀಡಿದರೂ ಯಾವುದೇ ಪ್ರಯೋಜನವಾಗುತ್ತಿಲ್ಲ. ಸ್ವತಃ ಇಂಧನ ಸಚಿವರೇ ಶಾಸಕರಾಗಿದ್ದರೂ ಕೂಡ ಇತ್ತ ಗಮನ ಹರಿಸುತ್ತಿಲ್ಲ. ಸಚಿವರ ಕ್ಷೇತ್ರದಲ್ಲಿ ಇಂತಹ ದುರವ್ಯಸ್ಥೆ ನಾಚೀಗೆಕೇಡು. ಕಾಂಗ್ರೆಸ್ ಆಡಳಿತ ಇದ್ದ ಮಾತ್ರಕ್ಕೆ ಇಂತಹ ತೊಂದರೆಗಳನ್ನು ನೀಡುವುದು ಶೋಭೆ ತರುವಂತಹದಲ್ಲ. ಮುಂದಿನ15 ದಿನಗಳ ಒಳಗೆ ಪಿಡಿಒ ನೇಮಕವಾಗದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಕಾಂಗ್ರೆಸ್ ಮುಖಂಡರು ಎಚ್ಚರಿಕೆ ನೀಡಿದ್ದಾರೆ.
Kshetra Samachara
22/04/2022 06:47 pm