ವಿಟ್ಲ: ಪಟ್ಟಣ ಪಂಚಾಯಿತಿ ನಲ್ಲಿ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಎಂಜಿನಿಯರ್‌ಗಳು ಇಲ್ಲದೇ ಜನರು ತಮ್ಮ ಕೆಲಸ ಕಾರ್ಯಗಳಿಗೆ ಪರದಾಡುವ ದುಸ್ಥಿತಿ ಬಂದಿದ್ದು, ಈ ಸಮಸ್ಯೆಯನ್ನು ಸರಿಪಡಿಸದಿದ್ದಲ್ಲಿ ಇದರ ವಿರುದ್ಧ ಕಾಂಗ್ರೆಸ್ ಹೋರಾಟ ನಡೆಸಲಿದೆ ಎಂದು ಎಂದು ವಿಟ್ಲ ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ವಕ್ತಾರ ರಮಾನಾಥ ವಿಟ್ಲ ಹೇಳಿದರು.
ಅವರು ವಿಟ್ಲದಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ವಿಟ್ಲ ಪಟ್ಟಣ ಪಂಚಾಯಿತಿ ಮೇಲ್ದರ್ಜೆಗೇರಿದ 6 ತಿಂಗಳಲ್ಲಿ ಮುಖ್ಯಾಧಿಕಾರಿ, ಆರೋಗ್ಯ ನಿರೀಕ್ಷಕರು, ಕಂದಾಯ ನಿರೀಕ್ಷಕರು, ಪ್ರಭಾರ ಅಭಿಯಂತರರು ಕಾರ್ಯ ನಿರ್ವಹಿಸುತ್ತಿದ್ದರು. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ವಿಟ್ಲದ ಆಡಳಿತ ವ್ಯವಸ್ಥೆ ತುಕ್ಕು ಹಿಡಿದಿದೆ ಎಂದರು.
ವಿಟ್ಲ ನಾಗರೀಕರಿಗೆ ಪಟ್ಟಣ ಪಂಚಾಯಿತಿಯಲ್ಲಿ ಒಂದೇ ಒಂದು ಕೆಲಸವೂ ಆಗುತ್ತಿಲ್ಲ. ಮುಖ್ಯಾಧಿಕಾರಿ ಹೊರತು ಪಡಿಸಿ ಬೇರೆಲ್ಲರೂ ವಾರದ 2 ದಿನಗಳಿಗೆ ನಿಯೋಜಿಸಲ್ಪಟ್ಟಿದ್ದರು. ಈಗ ಮುಖ್ಯಾಧಿಕಾರಿಯೂ ವರ್ಗಾವಣೆಯಾಗಿ ಎಲ್ಲಾ ಅಧಿಕಾರಿಗಳೂ ನಿಯೋಜನೆಯಲ್ಲೇ ಇರುವುದು ನಾಗರೀಕರ ಅಲೆದಾಟವನ್ನು ಹೆಚ್ಚಿಸಿದೆ. ವಿಟ್ಲ ವಿಧಾನ ಸಭಾ ಕ್ಷೇತ್ರ ಹೋದ ಬಳಿಕ ವಿಟ್ಲ ನಿರ್ಲಕ್ಷ್ಯಕ್ಕೊಳಗಾಗುತ್ತಿದೆ ಎಂದು ಆರೋಪಿಸಿದರು.
ಪಂಚಾಯಿತಿ ಸದಸ್ಯ ವಿ. ಕೆ. ಎಂ. ಅಶ್ರಫ್, ಪದ್ಮ ಪೂಜಾರಿ, ಅಬ್ದುಲ್ ರಹಿಮಾನ್ ಹಸೈನಾರ್ ನೆಲ್ಲಿಗುಡ್ಡೆ, ಲತಾವೇಣಿ ಉಪಸ್ಥಿತರಿದ್ದರು.
Kshetra Samachara
01/03/2022 08:32 pm