ಕುಂದಾಪುರ: ಕೇಂದ್ರ ಸರ್ಕಾರ ಜನ ವಿರೋಧಿ ಬಜೆಟ್ ಮಂಡಿಸಿದೆ ಎಂದು ಆಕ್ರೋಶ ವ್ಯಕ್ತಪಡಿಸಿ ಶುಕ್ರವಾರ ಕುಂದಾಪುರ ಶಾಸ್ತ್ರಿ ವೃತ್ತದಲ್ಲಿ ಸಿಐಟಿಯು ಸಂಚಲನ ಸಮಿತಿ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.
ಈ ಸಂದರ್ಭ ಸಿಐಟಿಯು ಸಂಚಾಲಕ ಎಚ್. ನರಸಿಂಹ ಮಾತನಾಡಿ, ಈ ಬಜೆಟ್ ನಲ್ಲಿ ಜನಸಾಮಾನ್ಯರಿಗೆ ಕೊಡ ಮಾಡುವ ಎಲ್ಲ ಹಣಕಾಸು ಕಡಿತ ಮಾಡಲಾಗಿದೆ. ಬಂಡವಾಳ ಹೂಡಿಕೆ ನೆಪದಲ್ಲಿ ಕೇಂದ್ರ ಸರಕಾರ ಜನರ ಆಸ್ತಿ ಮಾರಾಟ ಮಾಡಿ, ಕಾರ್ಪೊರೇಟ್ ಲೂಟಿಗೆ ಮುಂದಾಗಿರುವುದು ಸ್ಪಷ್ಟವಾಗಿದೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಕಳೆದ 2 ವರ್ಷಗಳಿಂದ ಲಾಕ್ ಡೌನ್ ನಿಂದ ಶೇ.84ರಷ್ಟು ಜನರು ಸಂಕಷ್ಟಕ್ಕೆ ಒಳಗಾಗಿದ್ದರು. ಅವರಿಗೆ ಈ ಬಜೆಟ್ ಯಾವುದೇ ಸಹಾಯ ಮಾಡಿಲ್ಲ ಎಂದು ದೂರಿದರು. ಸಿಐಟಿಯು ಜಿಲ್ಲಾಧ್ಯಕ್ಷ ಕೆ.ಶಂಕರ್, ಮಹಾಬಲ ವಡೇರಹೋಬಳಿ, ಬಲ್ಕೀಸ್, ಪ್ರಕಾಶ್ ಕೋಣಿ, ಲಕ್ಷ್ಮಣ ಮತ್ತಿತರರು ಉಪಸ್ಥಿತರಿದ್ದರು. ಚಂದ್ರಶೇಖರ ಸ್ವಾಗತಿಸಿದರು. ರಾಜು ದೇವಾಡಿಗ ವಂದಿಸಿದರು.
Kshetra Samachara
05/02/2022 06:00 pm