ಕಾಪು : ಕಾಪು ಪುರಸಭೆ ಚುನಾವಣೆ ಸೋಮವಾರ ನಡೆಯಲಿದ್ದು ಪ್ರಮುಖ ಪಕ್ಷಗಳಾದ ಕಾಂಗ್ರೆಸ್ ಹಾಗೂ ಬಿಜೆಪಿ ಎಲ್ಲ 23 ಸ್ಥಾನಗಳಲ್ಲಿ ಸ್ಪರ್ಧಿಸಿದ್ದು ಜೆಡಿಎಸ್, ಎಸ್ಡಿಪಿಐ, ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಹಾಗೂ ಪಕ್ಷೇತರರು ಕೆಲವು ವಾರ್ಡ್ಗಳಲ್ಲಿ ಸ್ಪರ್ಧೆಯಲ್ಲಿದ್ದಾರೆ
ಕಾಪು ಶಾಸಕ ಲಾಲಾಜಿ ಆರ್ ಮೆಂಡನ್ ಹಾಗೂ ಮಾಜಿ ಸಚಿವ ವಿನಯಕುಮಾರ ಸೊರಕೆ ಅವರ ನಡುವೆ ಜಿದ್ದಾಜಿದ್ದಿನ ಕ್ಷೇತ್ರವಾಗಿ ಮಾರ್ಪಟ್ಟಿದೆ. ಬಿಜೆಪಿ ಅಭ್ಯರ್ಥಿ ಪರವಾಗಿ ಕೇಂದ್ರ ಹಾಗೂ ರಾಜ್ಯ ಸಚಿವರ ಸಹಿತ ಘಟಾನುಘಟಿ ನಾಯಕರು ಪ್ರಚಾರ ನಡೆಸಿದ್ದರು.
ಮಾಜಿ ಸಚಿವ ವಿನಯಕುಮಾರ್ ಸೊರಕೆ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖರು ಪಾದಯಾತ್ರೆ ಸಹಿತ ಮನೆ ಮನೆ ಭೇಟಿ ಮೂಲಕ ಮತದಾರರ ಮನ ಗೆಲ್ಲಲು ಇನ್ನಿಲ್ಲದ ಕಸರತ್ತು ನಡೆಸಿದ್ದಾರೆ. ಕಾಂಗ್ರೆಸ್ ಆಡಳಿತ ಅವಧಿಯಲ್ಲಿ ಕಾರ್ಯರೂಪಕ್ಕೆ ಬಂದಿರುವ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಓಲೈಸುವ ಪ್ರಯತ್ನ ನಡೆಸಿದೆ.
ಜೆಡಿಎಸ್ ಕೂಡಾ ಏಳು ವಾರ್ಡಿಗಳಲ್ಲಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದು ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ್ ಶೆಟ್ಟಿ ನೇತೃತ್ವದಲ್ಲಿ ಭರದ ಪ್ರಚಾರ ಕಾರ್ಯ ನಡೆಸಿದೆ. ಈ ಬಾರಿ ಗೆದ್ದೇ ಗೆಲ್ಲುವ ಹುಮ್ಮಸ್ಸಿನಲ್ಲಿದೆ.
ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ, ಎಸ್ಡಿಪಿಐ ಸಹಿತ ಇತರ ಅಭ್ಯರ್ಥಿಗಳು ಕಣದಲ್ಲಿದ್ದು ಗೆಲುವಿಗಾಗಿ ಕಾರ್ಯತಂತ್ರವನ್ನು ರೂಪಿಸಿವೆ.
ಒಟ್ಟಿನಲ್ಲಿ ಜಿದ್ದಾಜಿದ್ದಿನ ಕ್ಷೇತ್ರವಾಗಿ ಕಾಪು ಮಾರ್ಪಟ್ಟಿದ್ದು ಮತದಾರರ ಕೃಪೆ ಯಾರ ಮೇಲೆ ಬೀಳಲಿದೆ ಎಂದು ಮಾತ್ರ ಕಾದು ನೋಡಬೇಕಾಗಿದೆ.
Kshetra Samachara
26/12/2021 01:52 pm