ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಪ್ರತಿಪಕ್ಷ ಸದಸ್ಯರು ತಮಗೆ ಮಾತನಾಡಲು ಅವಕಾಶ ನೀಡುತ್ತಿಲ್ಲ, ತಮ್ಮ ದನಿ ಅಡಗಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸದನದ ಬಾವಿಗಿಳಿದು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.
ಮನಪಾ ವ್ಯಾಪ್ತಿಯಲ್ಲಿ ತ್ಯಾಜ್ಯ ವಿಲೇವಾರಿ ಸಮರ್ಪಕವಾಗಿ ನಡೆಸುವ ಉದ್ದೇಶದಿಂದ ವಾಣಿಜ್ಯ ಸಂಕೀರ್ಣಗಳಲ್ಲಿ ಹಸಿತ್ಯಾಜ್ಯ ಸಂಸ್ಕಾರ ಘಟಕ ನಿರ್ಮಾಣಕ್ಕೆ ಕಾರ್ಯಾಗಾರ ಮಾಡಲಾಗುತ್ತದೆ. ಅಲ್ಲಿವರೆಗೆ ದಂಡನಾ ಶುಲ್ಕ ವಿಧಿಸುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗುತ್ತದೆ ಎಂದು ಮೇಯರ್ ಪ್ರೇಮಾನಂದ ಶೆಟ್ಟಿ ಹೇಳಿದರು.
ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಪ್ರತಿಪಕ್ಷ ಸದಸ್ಯರು, ತ್ಯಾಜ್ಯ ವಿಲೇವಾರಿ ಬಗ್ಗೆ ಜನರಿಗೆ ಗೊಂದಲಗಳಿಲ್ಲ. ಆದರೆ, ಜಿಲ್ಲಾಡಳಿತ ಸುಮ್ಮನೆ ಗೊಂದಲ ಸೃಷ್ಟಿಸುತ್ತಿದೆ. ಇದಕ್ಕೆ ಉಳಿದ ಪ್ರತಿಪಕ್ಷ ಸದಸ್ಯರು ದನಿಗೂಡಿಸಿದರು.
ಈ ಮಾತನ್ನು ಖಂಡಿಸಿದ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು ಆಕ್ಷೇಪ ವ್ಯಕ್ತಪಡಿಸಿದರು. ಈ ವೇಳೆ ಪ್ರತಿಪಕ್ಷ ಸದಸ್ಯರು ಜೋರು ದನಿಯಲ್ಲಿ ಗದ್ದಲ ಸೃಷ್ಟಿಸಿ, ಸುಧೀರ್ ಶೆಟ್ಟಿ ಮಾತನ್ನು ಖಂಡಿಸಿದರು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಮೇಯರ್, ಮುಖ್ಯ ಸಚೇತಕರಿಗೆ ಮಾತನಾಡಲು ಅವಕಾಶ ನೀಡಬೇಕೆಂದರು. ಈ ಸಂದರ್ಭ ಪ್ರತಿಪಕ್ಷ ಸದಸ್ಯರು 'ತಮ್ಮ ದನಿ ಅಡಗಿಸುವ ಕಾರ್ಯ ಮಾಡಲಾಗುತ್ತಿದೆ' ಎಂದು ಸದನದ ಬಾವಿಗಿಳಿದು ಮೇಯರ್ ಮುಂಭಾಗ ಬಂದು ಆಕ್ರೋಶ ವ್ಯಕ್ತಪಡಿಸಿದರು. ಒಂದಷ್ಟು ಹೊತ್ತು ಗದ್ದಲದ ಬಳಿಕ ಪರಿಸ್ಥಿತಿ ತಿಳಿಯಾಯಿತು.
Kshetra Samachara
30/10/2021 10:57 pm